BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಕಲಿಕೋತ್ಸವದಲ್ಲಿ ರಂಗೇರಿದ ಪೈವಳಿಕೆನಗರ ತರಕಾರಿ ತೋಟ
ಪೈವಳಿಕೆನಗರ, ಫೆ.10: ಅಟ್ಟೆಗೋಳಿ ಶಾಲೆಯಲ್ಲಿ ನಡೆದ ಪೈವಳಿಕೆ ಪಂಚಾಯತ್ ಮಟ್ಟದ ಕಲಿಕೋತ್ಸವದಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಶಾಲಾ ತರಕಾರಿ ತೋಟದ ಬಗ್ಗೆ ಮಂಡಿಸಿದ ಸೆಮಿನಾರ್ ಗೆ ಪ್ರಥಮ ಸ್ಥಾನ ದೊರಕಿದೆ. 7ಸಿ ತರಗತಿಯ ವಿದ್ಯಾರ್ಥಿಗಳಾದ ರಕ್ಷಣ್ ರೈ, ಲಕ್ಷ್ಮೀಶ, ಸುದೀಪ್, ಧನುಷ್, ವರದ ರಾಜ್, ಮಹೇಶ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸುಮಾರು ಮೂರು ವರ್ಷಗಳಿಂದ ಶಾಲೆಯ ತರಕಾರಿ ತೋಟದಲ್ಲಿ ತರಕಾರಿಗಳನ್ನು ಬೆಳೆಸಿ ಮಧ್ಯಾಹ್ನದೂಟಕ್ಕೆ ವಿತರಿಸಿ ಶಾಲಾ ಇಕೋ ಕ್ಲಬ್ ಜನಪ್ರಿಯತೆಗಳಿಸಿತ್ತು. ಇಕೋ ಕ್ಲಬ್ ನ ಹಲವು ಸದಸ್ಯರು ಬೆಳಗ್ಗೆ ಮತ್ತು ಸಂಜೆ ತಮ್ಮ ಅಮೂಲ್ಯ ಸಮಯವನ್ನು ಇದಕ್ಕಾಗಿ ಮೀಸಲಿರಿಸಿದ್ದರು. ಕೇರಳ ರಾಜ್ಯ ಕೃಷಿ ಇಲಾಖೆ ಕೊಡಮಾಡಿದ ತರಕಾರಿ ಬೀಜಗಳನ್ನು ಬಿತ್ತಿ ಶಿಕ್ಷಕರು ತಮ್ಮ ಮನೆಗಳಿಂದ ಸ್ವಯಂಪ್ರೇರಿತರಾಗಿ ತಂದ ಹಟ್ಟಿಗೊಬ್ಬರ, ಸೊಪ್ಪು, ಕೋಲು, ಶಾಲಾ ತಾರಸಿಯ ಮೇಲೆ ಬಿದ್ದ ತರಗೆಲೆ, ಮರದ ಸೊಪ್ಪು, ದನದ ಸೆಗಣಿ ಉಪಯೋಗಿಸಿ ಮಾಡಲಾದ ತೋಟದಲ್ಲಿ ಬೆಳೆದ ತರಕಾರಿಗಳನ್ನು ಶಾಲಾ ಬಿಸಿಯೂಟ ಯೋಜನೆಗೆ ಉಪಯೋಗಿಸಲಾಗುತ್ತಿದೆ. ಕೈತೊಳೆದು ಬಿಟ್ಟಂತಹ ನೀರನ್ನು ತರಕಾರಿ ತೋಟದಲ್ಲಿ ಉಪಯೋಗಿಸುವುದು ಜಲಸಂರಕ್ಷಣೆಗೆ ಶಾಲಾ ಇಕೋ ಕ್ಲಬ್ ಬರೆದ ಹೊಸ ಅಧ್ಯಯವಾಗಿದೆ. ಬಸಳೆ, ತೊಂಡೆಕಾಯಿ, ಬದನೆ, ಹರಿವೆ, ಮೆಣಸು, ಚೀನಿಕಾಯಿ, ಸೊರೆಕಾಯಿ, ಪಪ್ಪಾಯಿ, ನುಗ್ಗೆ ಮುಂತಾದ ತರಕಾರಿ ಪ್ರಬೇಧಗಳು ತೋಟದಲ್ಲಿವೆ. ಮಂಜೇಶ್ವರ ಉಪಜಿಲ್ಲಾ ಮಟ್ಟದ ಸ್ಪರ್ಧೆಗೆ ಸೆಮಿನಾರ್ ಆಯ್ಕೆಯಾಗಿದೆ. ಸತತ ಕಠಿಣ ಪರಿಶ್ರಮದ ಫಲವಾಗಿ ಬೆಳೆದ ತರಕಾರಿ ತೋಟದ ಜನಪ್ರಿಯತೆಗೆ ಪ್ರಸಿದ್ಧ ರಾಷ್ಟ್ರೀಯ ಕನ್ನಡ ದಿನಪತ್ರಿಕೆಯೊಂದರ ಕಛೇರಿಯಿಂದ ಪೈನಗರ್ ವಿಷನ್ ಗೆ ವಿವರ ಸಂಗ್ರಹಕ್ಕಾಗಿ ಬಂದ ದೂರವಾಣಿ ಕರೆಯೇ ಸಾಕ್ಷಿ. ನಂತರದ ದಿನಗಳಲ್ಲಿ ಹಲವು ಪತ್ರಿಕೆಗಳಲ್ಲಿ ತರಕಾರಿ ತೋಟದ ಬಗೆಗೆ ಲೇಖನಗಳು ಪ್ರಸಾರವಾದದ್ದು ಪರಿಶ್ರಮಕ್ಕೆ ಸಂದ ಗೌರವವೇ ಸರಿ. ತರಕಾರಿ ತೋಟಕ್ಕಾಗಿ ಅವಿಶ್ರಾಂತವಾಗಿ ದುಡಿಯುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರಿಗೆ ಪೈನಗರ್ ವಿಷನ್ ಬಳಗದ ತುಂಬು ಹೃದಯದ ಅಭಿನಂದನೆಗಳು.

No comments:

Post a Comment