BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********

ಗಣಿತದ ವಿವಿಧ ಮಜಲುಗಳ ಪರಿಚಯಿಸಿದ ಪೈವಳಿಕೆನಗರ ಗಣಿತೋತ್ಸವ

ಪೈವಳಿಕೆನಗರ, ಮಾ.3 : ವಿದ್ಯಾರ್ಥಿಗಳಲ್ಲಿ ಗಣಿತದ ಆಸಕ್ತಿಯನ್ನು ಹೆಚ್ಚಿಸಿ ಸೃಜನಾತ್ಮಕತೆಯನ್ನು ಬೆಳೆಸಲು ಸರ್ವ ಶಿಕ್ಷಾ ಅಭಿಯಾನ ಪ್ರಾಯೋಜಿತ ಗಣಿತೋತ್ಸವ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲೋರೆನ್ಸ್ ಡಿಸೋಜಾರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸರವರು ಅಧ್ಯಕ್ಷತೆ ವಹಿಸಿದ್ದರು. ಗಣಿತಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ಸೃಜನಾತ್ಮಕ ಚಟುವಟಿಕೆಗಳ ಪ್ರತಿಬಿಂಬವಾದ ಹೊತ್ತಗೆಯಾದ ಸಂಕೀರ್ಣವನ್ನು ಮುಖ್ಯೋಪಾಧ್ಯಾಯರು ಬಿಡುಗಡೆಗೊಳಿಸಿದರು. ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶ್ರೀ ರವೀಂದ್ರನಾಥ ಕೆ.ಆರ್. , ಶಾಲಾ ಗಣಿತ ಕ್ಲಬ್ ಸಂಚಾಲಕಿ ವತ್ಸಲಾ, ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀಧರ ಭಟ್ ಬೀಡುಬೈಲು, ಸಹಕಾರಿ ಸಂಘ ಕಾರ್ಯದರ್ಶಿ ಗೋಪಣ್ಣ ಕುರುಡಪದವು, ಶ್ರೀಲತಾ ಶುಭಾಶಂಸನೆ ಮಾಡಿದರು. ಶ್ರೀ ಅಬ್ದುಲ್ ಕರೀಂ ಪಿ.ಕೆ ಉಪಸ್ಥಿತರಿದ್ದರು. ಶಿಬಿರದಲ್ಲಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ಗಣಿತಗೀತೆ, ಟೇನ್ ಗ್ರಾಂ ನಿರ್ಮಾಣ, ಒರಿಗಾಮಿ, ಚಾರ್ಟ್ ಪ್ರದರ್ಶನ, ಮಾದರಿ ಪ್ರದರ್ಶನ ಏರ್ಪಡಿಸಲಾಗಿತ್ತು. ಶ್ರೀ ಪ್ರವೀಣ್ ಕನಿಯಾಲ ಸ್ವಾಗತಿಸಿ, ಕಾರ್ತಿಕ್ ವಂದಿಸಿದರು. ಇಕೋ ಕ್ಲಬ್ ಸಂಚಾಲಕರಾದ ಶ್ರೀ ಪ್ರಶಾಂತ್ ಕುಮಾರ್ ಅಮ್ಮೇರಿ ಕಾರ್ಯಕ್ರಮ ನಿರೂಪಿಸಿದರು.



ನವರಸ ಭಾವದಲ್ಲಿ ಮಿಂದೆದ್ದ ಪೈವಳಿಕೆನಗರ ಶಾಲಾ ಎಸ್ ಎಸ್ ಎಲ್ ಸಿ ವಿದಾಯಕೂಟ

ಪೈವಳಿಕೆನಗರ, ಫೆ.26 : ವಿದ್ಯಾರ್ಥಿ ಜೀವನ ಅವಿಸ್ಮರಣೀಯ. ಅದರಲ್ಲೂ ಹದಿಹರೆಯದ ಯುವ ಮನಸ್ಸುಗಳ ತುಡಿತ ಮಿಡಿತಗಳಿಗೆ ಸ್ಪಂದಿಸುವ ಹೈಸ್ಕೂಲ್ ಜೀವನ ಮರೆಯಲಸಾಧ್ಯ. ಒಂದನೇ ತರಗತಿಯಿಂದಲೇ ಗೆಳೆಯರ ಜತೆ ಸೇರಿ ಆಡಿದ ಆಟ, ಓಡಿದ ಓಟ ಈ ಜನುಮದ ಸುಮಧುರ ಅನುಭವ. ಜನ್ಮ ನೀಡಿದ ತಂದೆ ತಾಯಿ, ಪಾಠ ಹೇಳಿದ ಗುರುಗಳು, ಸಂತಸ ತಂದ ಪಾಠಶಾಲೆಯ ಋಣವನ್ನು ತೀರಿಸಲು ಅಸಾಧ್ಯ. ನಮ್ಮ ಜತೆಗಿರುವ ಗೆಳೆಯರು ಒಂದಲ್ಲಾ ಒಂದು ದಿನ ವಿದಾಯ ಹೇಳಬೇಕಾಗಿರುವುದು ಪ್ರಕೃತಿ ನಿಯಮ. ಪೈವಳಿಕೆನಗರ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳ ಪಾಲಿಗೆ ಫೆಬ್ರವರಿ 26 ಸಂಭ್ರಮದ ದಿನವಾಗಿತ್ತು. ಒಂದೆಡೆ ಐಟಿ ಪರೀಕ್ಷೆಯ ಆತಂಕವಾದರೆ ಇನ್ನೊಂದೆಡೆ ಗರಿಗರಿ ಉಡುಪುಗಳೊಂದಿಗೆ ಸಂಭ್ರಮಿಸುತ್ತಿದ್ದ ವಿದ್ಯಾರ್ಥಿಗಳಿಂದ ಪೈವಳಿಕೆನಗರ ಕ್ಯಾಂಪಸ್ ನಳನಳಿಸುತ್ತಿತ್ತು. ಮದ್ಯಾಹ್ನ ವೆಜಿಟೇರಿಯನ್ ಬಿರಿಯಾನಿ, ಹೋಳಿಗೆ, ಪಾಯಸದ ಪರಿಮಳ. ಅಪರಾಹ್ನ ನಡೆದ ಸಭಾ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಶ್ರೀ ಜೋರ್ಜ್ ಜೋಸೆಫ್ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸರವರು ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಕರಾದ ಶ್ರೀ ವಿಶ್ವನಾಥ ಅಮ್ಮೇರಿ, ಆರೋಗ್ಯ ಕ್ಲಬ್ ಸಂಚಾಲಕರಾದ ಶ್ರೀ ರವೀಂದ್ರನಾಥ ಕೆ.ಆರ್. , ಶಾಲಾ ಸಂಪನ್ಮೂಲ ಸಂಚಾಲಕರಾದ ಶ್ರೀ ಕೃಷ್ಣಮೂರ್ತಿ ಎಂ. ಎಸ್. , ಸಮಾಜವಿಜ್ಞಾನ ಕ್ಲಬ್ ಸಂಚಾಲಕ ಹಾಗೂ ಶಾಲಾ ಮುಖ್ಯ ಪರೀಕ್ಷಕರಾದ ಶ್ರೀ ಅಬ್ದುಲ್ ಲತೀಫ್ ಕೊಕ್ಕೆಚಾಲ್, ಶ್ರೀಮತಿ ರೇಶ್ಮಾ ಶುಭಾಶಂಸನೆಗೈದರು. ಗಾಯಕರಾದ ಶ್ರೀ ಸುಧೀಶ್ ಪೆರುಲ್ ಅವರಿಂದ ಸುಗಮ ಸಂಗೀತ ಜರಗಿತು. ಪುಂಡಲೀಕ, ಶ್ರೀಹರಿ, ಮುನೀರಾ ಮುಂತಾದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಆಯಿಷತ್ ಆಶ್ರೀನಾ ಸ್ವಾಗತಿಸಿ ಅಕ್ಷತಾ ವಂದಿಸಿದರು. ಅಕ್ಷತಾ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಹರ್ಷಿತ್ ಹಾಗೂ ನಿತಿನ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ಅವಿಸ್ಮರಣೀಯ ಫೋಟೋ ಸೆಶನ್ ನ ಮೂಲಕ ವಿದಾಯಕೂಟಕ್ಕೆ ತೆರೆಬಿದ್ದಿತು. ವಿದಾಯಕೂಟ ಸಂಚಾಲಕರಾದ ಶ್ರೀಮತಿ ಶಶಿಕಲಾ ಕಾರ್ಯಕ್ರಮದ ಮೇಲ್ನೋಟ ವಹಿಸಿದರು.(ಪೈನಗರ್ ವಿಷನ್ ಎಸ್ ಎಸ್ ಎಲ್ ಸಿ ಬ್ಯೂರೋ ವರದಿ)


ಪೈವಳಿಕೆನಗರ ಶಾಲೆಯ ಇಲೆಕ್ಟ್ರೋನಿಕ್ಸ್ ಪ್ರತಿಭೆಗೆ ರಾಸ್ ಬೆರಿ ಪೈ ಕಂಪ್ಯೂಟರ್ ವಿತರಣೆ
ಕಾಸರಗೋಡು, ಫೆ.21: ವಿಜ್ಞಾನ ತಂತ್ರಜ್ಞಾನ ವಿಕಾಸವಾಗುತ್ತಿರುವ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇರಳ ರಾಜ್ಯದ ಎಲ್ಲಾ ಸಾರ್ವಜನಿಕ ವಲಯದ ಶಾಲೆಯಲ್ಲಿ ಕಲಿಯುತ್ತಿರುವ 8ನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಸ್ ಬೆರಿ ಕಂಪ್ಯೂಟರ್ ವಿತರಿಸಲಾಯಿತು. ರಾಜ್ಯಮಟ್ಟದ ಕಾರ್ಯಕ್ರಮವನ್ನು ಎರ್ನಾಕುಲಂನಿಂದ ಮುಖ್ಯಮಂತ್ರಿ ಶ್ರೀ ಉಮ್ಮನ್ ಚಾಂಡಿ ಉದ್ಘಾಟಿಸಿದರು. ಮಲಪ್ಪುರಂನಿಂದ ಕೈಗಾರಿಕಾ ಸಚಿವರು ಹಾಗೂ ಕಾಸರಗೋಡಿನಿಂದ ಶಿಕ್ಷಣ ಸಚಿವರಾದ ಶ್ರೀ ಅಬ್ದು ರಬ್ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾಞಂಗಾಡ್ ವ್ಯಾಪಾರಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಜಿಲ್ಲೆಯ 124 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ 8ಎ ತರಗತಿಯ ವಿದ್ಯಾರ್ಥಿ ಜಗದೀಶ ಶಾಲೆಯ ಪರವಾಗಿ ಬಹುಮಾನ ಸ್ವೀಕರಿಸಿದನು. ಈತ ಜಿಲ್ಲಾ ಮಟ್ಟದ ವೃತ್ತಿಪರಿಚಯ ಮೇಳದಲ್ಲಿ ಇಲೆಕ್ಟ್ರೋನಿಕ್ಸ್ ವಿಭಾಗದಲ್ಲಿ ಜಲಪ್ರವಾಹ ಅಲಾರಂ ರಚಿಸಿ ಕಾರ್ಯನಿರ್ವಹಿಸಿ ಗ್ರೇಡ್ ಪಡೆದಿದ್ದನು. ರಾಸ್ ಬೆರಿ ಕಂಪ್ಯೂಟರಿನಲ್ಲಿ ರೋಬೋಟ್, ಮೋಟಾರ್ , ಅಟೋಮೇಟಿಕ್ ಯಂತ್ರ, ವಾಹನ ಮುಂತಾದವುಗಳನ್ನು ಚಾಲನೆ ಮಾಡಲು ಪ್ರೋಗ್ರಾಂ ಮಾಡಲಾಗುವುದು. ಕಾಞಂಗಾಡ್ ವ್ಯಾಪಾರಭವನದಲ್ಲಿ ನಡೆದ ಕಾರ್ಯಕ್ರಮವನ್ನು ವಿದ್ಯಾಬ್ಯಾಸ ಚಾನೆಲ್ ಆದ ವಿಕ್ಟರ್ಸ್ ನೇರಪ್ರಸಾರ ಮಾಡಿತ್ತು.

No comments:

Post a Comment