BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಕಂದಾಯ ಜಿಲ್ಲಾ ವಿಜ್ಞಾನಮೇಳದಲ್ಲಿ ವಿಜಯ ಚರಿತ್ರೆ ಮುಂದುವರೆಸಿದ ರಜತ್ ಕುಮಾರ್
ಚಟ್ಟಂಟಾಲ್, .14: ಚಟ್ಟಂಚಾಲಿನಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ವೃತ್ತಿಪರಿಚಯ ಮೇಳದಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆ ತನ್ನ ವಿಜಯ ಇತಿಹಾಸ ಮುಂದುವರೆಸಿದೆ. ಸೋಮವಾರ ನಡೆದ ವೃತ್ತಿಪರಿಚಯ ಮೇಳದಲ್ಲಿ ಹೈಸ್ಕೂಲ್ ವಿಭಾಗದ ಬುಕ್ ಬೈಂಡಿಂಗ್ ನಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ 10ಎ ತರಗತಿಯ ವಿದ್ಯಾರ್ಥಿ ಹಾಗೂ ಪೈನಗರ್ ವಿಷನ್ ಪ್ರತಿನಿಧಿ ರಜತ್ ಕುಮಾರ್ ಎ ಆರ್ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ತಲಪಾಡಿಯಿಂದ ಕೂತುಪರಂಬವರೆಗೆ ವಿಶಾಲವಾಗಿ ವ್ಯಾಪಿಸಿರುವ ಕಾಸರಗೋಡು ಕಂದಾಯಜಿಲ್ಲೆಯ ಏಳು ಉಪಜಿಲ್ಲೆಗಳಿಂದ ಭಾಗವಹಿಸಿದ 14 ವಿದ್ಯಾರ್ಥಿಗಳಲ್ಲಿ ಒಬ್ಬನಾದ ರಜತ್ ಕುಮಾರ್ ಉಳಿದ 13 ಸ್ಪರ್ಧಿಗಳನ್ನು ಲೀಲಾಜಾಲವಾಗಿ ಹಿಮ್ಮೆಟ್ಟಿಸಿ ಪ್ರಥಮ ಸ್ಥಾನಗಳಿಸಿದ್ದು ಅಭಿನಂದನಾರ್ಹ ಸಾಧನೆಯೇ ಹೌದು. ಕಳೆದ ವರ್ಷ 10ಸಿ ತರಗತಿಯ ಹನ್ನತ್ ಬೀಬಿ ಎಂಬ್ರಾಯಿಡರಿಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಚಲನ ಸೃಷ್ಟಿಸಿದ್ದು ಸಾಧನೆಗೆ ಸಂದ ಜಯ. ಇಂತಹ ಇತಿಹಾಸವನ್ನು ಸಾಧನೆಯಿಂದ ಮುಂದುವರಿಸಿದ ಕೀರ್ತಿ ರಜತ್ ಕುಮಾರ್ ಗೆ ಸಲ್ಲುವುದು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಎ ಗ್ರೇಡ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಈ ತಿಂಗಳ 23ರಿಂದ 27ರತನಕ ಪಾಲಕ್ಕಾಡ್ ನಲ್ಲಿ ಕೇರಳ ರಾಜ್ಯ ವಿಜ್ಞಾನ ಮೇಳ ನಡೆಯಲಿದೆ. ವಿಜ್ಞಾನ ಮೇಳಕ್ಕಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಅಹೋರಾತ್ರಿ ಶ್ರಮಿಸಿದ ಪೈವಳಿಕೆನಗರದ ಶಿಕ್ಷಕ, ಶಿಕ್ಷಕಿಯರಿಗೆ ಪೈನಗರ್ ವಿಷನ್ ಧನ್ಯವಾದಗಳನ್ನು ಸಲ್ಲಿಸುವುದು. ಗುರುವಾರ ಕರೆದ ಶಾಲಾ ಅಸೆಂಬ್ಲಿಯಲ್ಲಿ ರಜತ್ ಕುಮಾರ್ ಗೆ ಅಭಿನಂದನೆ ಸಲ್ಲಿಸಲಾಯಿತು. ಅದರೊಂದಿಗೆ ಉಪಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸೀನಿಯರ್ ಹುಡುಗಿಯರ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದ ಪ್ಲಸ್ ವನ್ ಮಾನವಿಕ ವಿಭಾಗದ ಶೆಹೀರ್ ಬಾನು ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಉಪಜಿಲ್ಲಾ ಮಟ್ಟದ ವಿಜ್ಞಾನಮೇಳದಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ನನ್ನ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿದ ಶಿಕ್ಷಕರಿಗೆ ಧನ್ಯವಾದಗಳು
ಪೈವಳಿಕೆನಗರ,.14: ನನಗೆ ಪ್ರೋತ್ಸಾಹ ನೀಡಿದ  ಪ್ರಶಾಂತ್ ಕುಮಾರ್ ಸರ್, ಹಸೀನಾ ಟೀಚರ್ ಹಾಗೂ ಗುರುವೃಂದದವರಿಗೆ ತುಂಬು ಹೃದಯದ ಧನ್ಯವಾದಗಳು. ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಇತ್ತು. ಫಲಿತಾಂಶ ತಿಳಿದು ತುಂಬಾ ಖುಷಿ ಆಯ್ತು. ಮನೆಯವರು ನನಗೆ ತುಂಬಾ ಪ್ರೋತ್ಸಾಹ ನೀಡುತ್ತಾರೆ. ನನಗೆ 6ನೇ ತರಗತಿಯಲ್ಲೇ  ಬುಕ್ ಬೈಂಡಿಂಗ್ ಕಲಿಸಿದ ಪ್ರಶಾಂತ್ ಕುಮಾರ್ ಸರ್ ಮತ್ತು ಹಸೀನಾ ಟೀಚರ್ ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ ಎಂದು ವೃತ್ತಿಪರಿಚಯ ಮೇಳದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ರಜತ್ ಕುಮಾರ್ ಹೇಳಿದ್ದಾರೆ. ಜಿಲ್ಲಾ ವೃತ್ತಿಪರಿಚಯ ಮೇಳದಲ್ಲಿ ಪ್ರಥಮ ಸ್ಥಾನ ಪಡೆದ ಫಲಿತಾಂಶ ಪ್ರಕಟವಾದ ನಂತರ ರಜತ್ ಕುಮಾರ್ ಪೈನಗರ್ ವಿಷನ್ ನೊಂದಿಗೆ ಸಂತಸ ಹಂಚಿಕೊಂಡರು. ಫಲಿತಾಂಶ ಬಂದ ಕೂಡಲೇ ತಮ್ಮ ಬುಕ್  ಬೈಂಡಿಂಗ್ ಗುರುಗಳನ್ನು ಕಂಡು ಕೃತಜ್ಞತೆಗಳನ್ನು ಸಲ್ಲಿಸಿದ್ದು  ರಜತ್ ಕುಮಾರ್ ವಿನಯ, ವಿಧೇಯತೆ, ಕೃತಜ್ಞತಾ ಭಾವಕ್ಕೆ ಸಾಕ್ಷಿಯಾಗಿದೆ. ಈ ಮೂಲಕ ತಮ್ಮ ಯಶಸ್ಸನ್ನು ಗುರುಗಳಿಗೆ ಅರ್ಪಿಸಿದುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ಒಂದನೇ ತರಗತಿಯಿಂದಲೇ ಪೈವಳಿಕೆನಗರ ಶಾಲೆಯಲ್ಲಿ ತನ್ನ ಶೈಕ್ಷಣಿಕ ಜೀವನವನ್ನು ಆರಂಭಿಸಿದ ರಜತ್ ಕುಮಾರ್ ಪ್ರತಿಭಾವಂತ ವಿದ್ಯಾರ್ಥಿ. ತನ್ನ ಓರಗೆಯವರೊಂದಿಗೆ ಪ್ರೀತಿಯಲ್ಲಿ ಬೆರೆಯುವ ರಜತ್ ತನ್ನ ಶಾಂತಚಿತ್ತ, ವಿನಯ, ವಿಧೇಯತೆ, ಸಂಸ್ಕಾರಯುತ ನಡೆಗಳಿಂದ ಅಧ್ಯಾಪಕ ಬಳಗದಲ್ಲಿ ಉತ್ತಮ ವಿದ್ಯಾರ್ಥಿಯೂ ನಿಜ. ಆರನೇ ತರಗತಿಯಿಂದ ವೃತ್ತಿಪರಿಚಯ ಮೇಳದಲ್ಲಿ ಮೊದಲ ಬಾರಿಗೆ ಬುಕ್ ಬೈಂಡಿಂಗ್ ನಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಂತರ 7 ನೇ ತರಗತಿಯಲ್ಲೂ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ, 8 ನೇ ತರಗತಿಯಲ್ಲಿ ಉಪಜಿಲ್ಲಾ ಮಟ್ಟದ ನೆಟ್ ಮೇಕಿಂಗ್ ನಲ್ಲಿ ದ್ವಿತೀಯ, 9ನೇ ತರಗತಿಯಲ್ಲಿ ಉಪಜಿಲ್ಲಾ ಬುಕ್ ಬೈಂಡಿಂಗ್ ನಲ್ಲಿ ಪ್ರಥಮ ಸ್ಥಾನಗಳಿಸಿದ ರಜತ್ 10ನೇ ತರಗತಿಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದದ್ದು ಯಶಸ್ಸಿನ ಹಾದಿಯಲ್ಲಿ 5 ವರ್ಷದ ಮೈಲಿಗಲ್ಲು ಆಗುವುದು. ಪ್ರತಿ ವರ್ಷ ಇದಕ್ಕಾಗಿ 2 ವಾರಗಳನ್ನು ಮೀಸಲಿಡುವ ರಜತ್ 6ನೇ ತರಗತಿಯಿಂದ ಇಲ್ಲಿಯವರೆಗೆ ತಯಾರಿಸಿದ ಪುಸ್ತಕಗಳ ಸಂಖ್ಯೆ 100ಕ್ಕಿಂತಲೂ ಹೆಚ್ಚು. ಪೈನಗರ್ ವಿಷನ್ ಬಳಗದ 2 ನೇ ಆವೃತ್ತಿಯಲ್ಲಿ 8ಸಿ ತರಗತಿಯ ಪ್ರತಿನಿಧಿಯಾದ ರಜತ್ ಕುಮಾರ್ 4ನೇ ಆವೃತ್ತಿಯಲ್ಲಿ 10ಎ ತರಗತಿಯ ಪ್ರತಿನಿಧಿ ಮತ್ತು ಹಯರ್ ಸೆಕೆಂಡರಿ ಬ್ಯೂರೋ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಕಥೆಗಾರನೂ, ಚಿತ್ರಕಾರನೂ ಆಗಿರುವ ರಜತ್ ಕುಮಾರ್ ನ ಹಲವು ಕೃತಿಗಳು ನಾಡಿನ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಪೈವಳಿಕೆನಗರ ಶಾಲೆಯ ಅಭಿಮಾನವಾಗಿರುವ, ಪೈನಗರ್ ವಿಷನ್ ಬಳಗದ ಹೆಮ್ಮೆಯ ಸದಸ್ಯನಾಗಿರುವ ರಜತ್ ಕುಮಾರ್ ಗೆ ಸಂಪಾದಕೀಯ ಬಳಗವು ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವುದು. ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗೆ ಶುಭ ಹಾರೈಸುವುದು.

ಕನ್ನಡ ಸಾಹಿತ್ಯ ರಸಪ್ರಶ್ನೆಯಲ್ಲಿ ಪೈವಳಿಕೆನಗರಕ್ಕೆ ದ್ವಿತೀಯ


ಉಪ್ಪಳ, .19 : ಮಂಜೇಶ್ವರ ಬಿ ಆರ್ ಸಿಯಲ್ಲಿ ಶನಿವಾರ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ರಸಪ್ರಶ್ನೆಯಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲಾ ತಂಡ ದ್ವಿತೀಯ ಸ್ಥಾನಗಳಿಸಿದೆ. ಪೈನಗರ್ ವಿಷನ್ ಉಪಸಂಪಾದಕ ಹಾಗೂ 9ಸಿ ತರಗತಿಯ ವಿದ್ಯಾರ್ಥಿ ಕಾರ್ತಿಕ್ ಕೆ ಹಾಗೂ 10ಎ ಪ್ರತಿನಿಧಿ ರಕ್ಷಿತ್ ಕುಮಾರ್ ರಸಪ್ರಶ್ನೆಯಲ್ಲಿ ಶಾಲೆಯನ್ನು ಪ್ರತಿನಿಧಿಸಿದ್ದರು. ಜಯಗಳಿಸಿದ ವಿದ್ಯಾರ್ಥಿಗಳಿಗೆ ಪೈನಗರ್ ವಿಷನ್ ಬಳಗದ ತುಂಬು ಹೃದಯದ ಅಭಿನಂದನೆಗಳು.

No comments:

Post a Comment