BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********

PAINAGAR VISION Archive 1516

ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳ ಸಂಪನ್ನ

ಕುಂಜತ್ತೂರು, .20 : ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳ ಕುಂಜತ್ತೂರು ವೃತ್ತಿಪರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಜರಗಿತು. ವಿಜ್ಞಾನ ಮತ್ತು ಗಣಿತ ಸೋಮವಾರ, ಇತರ ಮೇಳಗಳು ಮಂಗಳವಾರ ನಡೆದವು. ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ಶ್ರೀಮತಿ ಸೌಮಿನಿ ಕಲ್ಲತ್ತ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಜೇಶ್ವರ ವಿದ್ಯಾಧಿಕಾರಿ, ಜಿಲ್ಲಾ ಉಪಯೋಜನಾಧಿಕಾರಿ, ಶಾಲಾ ಪ್ರಾಂಶುಪಾಲರು, ರಾಜಕೀಯ ನೇತಾರರು, ಪಿಟಿಎ ಪದಾಧಿಕಾರಿಗಳು, ಕ್ಲಬ್ ಗಳ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ಪಜಿಲ್ಲಾ ವಿಜ್ಞಾನಮೇಳದಲ್ಲಿ ಚಾಂಪಿಯನ್ ಶಿಪ್ ಪಡೆದ ಪೈವಳಿಕೆನಗರ
ಕುಂಜತ್ತೂರು, .20 : ಕುಂಜತ್ತೂರು ಶಾಲೆಯಲ್ಲಿ ನಡೆದ ಉಪಜಿಲ್ಲಾ ವಿಜ್ಞಾನಮೇಳದಲ್ಲಿ ಪೈವಳಿಕೆನಗರ ಕಲವು ವಿಶೇಷ ಸಾಧನೆಗಳನ್ನು ಮಾಡಿದೆ. ಹೈಸ್ಕೂಲು ವಿಭಾಗದ ಗಣಿತ ಮೇಳದಲ್ಲಿ ಸತತ 5ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮತ್ತು ತರಬೇತಿ ನೀಡಿದ ಶಿಕ್ಷಕರಿಗೆ ಗೆಲುವಿನ ಮಂದಹಾಸ ಬೀರಲು ಅವಕಾಶ ದೊರೆತಿದೆ. ಧರ್ಮತ್ತಡ್ಕ ಶಾಲೆಯ ತೀವ್ರ ಪೈಪೋಟಿ ನಡುವೆ ನಮ್ಮ ಗಣಿತ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಸಂಪ್ರದಾಯದಂತೆ ಉಳಿಸಿಕೊಂಡಿದ್ದಾರೆ. ಕರಕುಶಲ ಮೇಳದ ಹಯರ್ ಸೆಕೆಂಡರಿ ವಿಭಾಗದಲ್ಲಿ ಪೈವಳಿಕೆನಗರ ಶಾಲೆ ಸಮಗ್ರ ಪ್ರಶಸ್ತಿಯನ್ನು ಗಳಿಸಿ ಚರಿತ್ರೆ ಉಳಿಸಿಕೊಂಡಿದೆ. ಉಳಿದಂತೆ ಹೈಸ್ಕೂಲ್ ವಿಭಾಗದ ಕರಕುಶಲ ಮೇಳದಲ್ಲಿ ಎರಡನೇ ಸ್ಥಾನ ಪಡೆದಿದೆ. ಯುಪಿ ವಿಭಾಗದ ಗಣಿತ ಮೇಳದಲ್ಲಿ ಮೂರನೇ ಸ್ಥಾನ ಪಡೆದಿದೆ. ಕರಕುಶಲ ಮೇಳದಲ್ಲಿ ಎಲ್ ಪಿ 2, ಯುಪಿ 5, ಹೈಸ್ಕೂಲ್ 14, ಹಯರ್ ಸೆಕೆಂಡರಿ 8 ಪ್ರಶಸ್ತಿ ಗಳಿಸಿದೆ. ಗಣಿತ ಮೇಳದ ಯುಪಿ 2, ಹೈಸ್ಕೂಲ್ 10, ಹಯರ್ ಸೆಕೆಂಡರಿ 1, ವಿಜ್ಞಾನ ವಿಭಾಗದಲ್ಲಿ ಹೈಸ್ಕೂಲ್ 1, ಹಯರ್ ಸಕೆಂಡರಿ 2, ಸಮಾಜವಿಜ್ಞಾನ ಯುಪಿ 1, ಹಯರ್ ಸೆಕೆಂಡರಿ 3 ಪ್ರಶಸ್ತಿಗಳಿಸಿದೆ. ವಿಜ್ಞಾನ ನಾಟಕದಲ್ಲಿ ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ನಾಟಕ ತವರೂರು ಮಿಯಪದವು ಶಾಲೆಯನ್ನೇ ಮಣಿಸಿ ಎ ಗ್ರೇಡಿನೊಂದಿಗೆ ಜಿಲ್ಲಾಮಟ್ಟದಲ್ಲಿ ಸ್ಪರ್ಧಿಸಿದ್ದಾರೆ. ಪರಿಸರ ಮತ್ತು ಕುಟುಂಬ ಕಥಾನಕವನ್ನು ಆಧರಿಸಿ ಹೆಣೆಯಲಾಗಿದ್ದ ಮಲಯಾಳ ನಾಟಕವನ್ನು ಮಂಗಳೂರಿನ ರೆಜಿತಾ ಟೀಚರ್ ನಿರ್ದೇಶಿಸಿದ್ದರು. 9ಬಿ ತರಗತಿಯ ವಿದ್ಯಾರ್ಥಿನಿಯರು ನಾಟಕ ಪ್ರದರ್ಶಿಸಿದ್ದರು. ಉಪಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜಯಗಳಿಸಿದರೂ ಕೆಲವು ರಕ್ಷಕರ ಕಿರಿಕ್ ನಡುವೆ ಮಂಗಳವಾರ ಕುಣಿಯ ಶಾಲೆಯಲ್ಲಿ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ಇತಿಹಾಸ ಮೆರೆದರು. ಜಿಲ್ಲಾ ಮಟ್ಟದ ನಾಟಕದಲ್ಲಿ 9ಬಿ ತರಗತಿಯ ಅನು ಉತ್ತಮ ನಟಿ ಎಂದು ತೀರ್ಪುಗಾರರ ಪ್ರಶಸ್ತಿಗೆ ಅರ್ಹಳಾಗಿದ್ದು ಪೈವಳಿಕೆನಗರ ಶಾಲೆಯ ಕೀರ್ತಿಗೆ ಗರಿ ಸೇರಿದಂತಾಗಿದೆ. ಜಯಗಳಿಸಿದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪೈನಗರ್ ವಿಷನ್ ತುಂಬು ಹೃದಯದ ಭಿನಂದನೆಗಳನ್ನು ಸಲ್ಲಿಸುವುದು.

ರಂಗೇರಿಸಲಿರುವ ಶಾಲಾ ಕಲೋತ್ಸವ
ಪೈವಳಿಕೆನಗರ, .23 : ಶಾಲಾ ಕ್ರೀಡೋತ್ಸವದ ಬೆನ್ನಲ್ಲೇ ಕಲೋತ್ಸವಕ್ಕಾಗಿ ಪೈವಳಿಕೆನಗರ ಶಾಲೆ ಸಜ್ಜಾಗಿದೆ. ಅಕ್ಟೋಬರ್ 29 ಮತ್ತು 30ರಂದು ಕಲೋತ್ಸವ ವೇದಿಕೆ ಸ್ಪರ್ಧೆಗಳು ನಡೆಯಲಿದ್ದು ಆಚರಣಾ ಸಮಿತಿ ಸಕಲ ಸಿದ್ದತೆ ನಡೆಸುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಒಂದಲ್ಲಾ ಒಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಕಲೋತ್ಸವದ ಫಲಿತಾಂಶಗಳು ಶಾಲಾ ಅಧಿಕೃತ ಬ್ಲೋಗ್ ನಲ್ಲಿ ಪ್ರಕಟವಾಗಲಿದ್ದು ಪೈನಗರ್ ವಿಷನ್ ಪ್ರತ್ಯೇಕ ಪುರವಣಿಯಲ್ಲಿ ಪ್ರಕಟಿಸಲಿದೆ. ಇಂಟರ್ ನೆಟ್ ಸೌಕರ್ಯವಿಲ್ಲದ ಓದುಗರು ಅಂಗೈಯಗಲದ ಸ್ಮಾರ್ಟ್ ಫೋನ್ ನಲ್ಲಿ PAIVALIKENAGAR ಎಂಬ ಶಾಲಾ ಬ್ಲೋಗ್ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿ ವೀಕ್ಷಿಸಬಹುದು.

ಪೈವಳಿಕೆನಗರ ಶಾಲೆಯಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯ ದಸರಾ ನಾಡಹಬ್ಬ

ಪೈವಳಿಕೆನಗರ, .17 : ಗಡಿನಾಡ ಕಲಾಸಂಘ ಪೈವಳಿಕೆ , ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಮತ್ತು ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆ ಸಂಯುಕ್ತ ಆಶ್ರಯದಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯ ಪ್ರತೀಕವಾದ ದಸರಾ ನಾಡಹಬ್ಬ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲಾ ಮುಖ್ಯ ಸಭಾಂಗಣದಲ್ಲಿ ನಡೆಯಿತು.ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಶ್ರೀ ಎಸ್.ವಿ. ಭಟ್ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದರು. ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯ ಎಂ. ವಿಶ್ವನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಶ್ರೀ ಬೇ. ಸಿ. ಗೋಪಾಲಕೃಷ್ಣ ಭಟ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ.ಪಿ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶ್ರೀ ರಾಮಚಂದ್ರ ಭಟ್ ಧರ್ಮತ್ತಡ್ಕ ಶುಭ ಹಾರೈಸಿದರು. ಹತ್ತಕಿಂತಲೂ ಅಧಿಕ ಶಾಲೆಗಳಿಂದ 100ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಲಘು ಸಂಗೀತ, ದೇಶಭಕ್ತಿಗೀತೆ, ಭಾಷಣ ಮುಂತಾದ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎಲ್ ಪಿ ವಿಭಾಗದಲ್ಲಿ ಹೆದ್ದಾರಿ ಶಾಲೆ, ಯುಪಿ ವಿಭಾಗದಲ್ಲಿ ಕಾಯರ್ ಕಟ್ಟೆ ಶಾಲೆ, ಹೈಸ್ಕೂಲ್ ವಿಭಾಗದಲ್ಲಿ ಬೇಕೂರು ಶಾಲೆ, ಹಯರ್ ಸೆಕೆಂಡರಿ ವಿಭಾಗದಲ್ಲಿ ಪೈವಳಿಕೆನಗರ ಶಾಲೆ ಸಮಗ್ರ ಪ್ರಶಸ್ತಿಗಳಿಸಿತು. ಗಡಿನಾಡ ಕಲಾಸಂಘ ಪೈವಳಿಕೆ ಇದರ ಕಾರ್ಯದರ್ಶಿ ಶ್ರೀ ರಾಘವ ಬಲ್ಲಾಳ್ ಸ್ವಾಗತಿಸಿ, ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಮೊಹಮ್ಮದ್ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ತಿರುಮಲೇಶ್ವರ ಭಟ್ ನಿರೂಪಿಸಿದರು.

ಶಾಲಾ ಕ್ರೀಡಾ ಕೂಟ ನಡೆದ ಮೈದಾನದ ಶುಚೀಕರಣ
ಪೈವಳಿಕೆನಗರ, .17: ಶಾಲಾ ಕ್ರೀಡಾ ಕೂಟದಲ್ಲಿ ವಿದ್ಯಾರ್ಥಿಗಳ ಉತ್ಸಾಹದಿಂದ ಧೂಳೆದ್ದ ಪೈವಳಿಕೆ ನಗರ ಶಾಲಾ ಮೈದಾನವನ್ನು ಶುಚಿಗೊಳಿಸಲು ವಿದ್ಯಾರ್ಥಿಗಳು ರಸಾಹಸ ಪಡಬೇಕಾಯಿತು. ಶನಿವಾರ ಶಾಲಾ ಸಭಾಂಗಣದಲ್ಲಿ ದಸರಾ ನಾಡಹಬ್ಬ ನಡೆಯಲಿತ್ತು. ಪೂರ್ವಾಹ್ನವೇ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಪಿಟಿಎ ಅಧ್ಯಕ್ಷರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮೈದಾನವನ್ನು ಶುಚಿಗೊಳಿಸಿದರು. ಶಾಲಾ ಅಧಿಕೃತರ ಹಾಗೂ ವಿದ್ಯಾರ್ಥಿಗಳ ಶುಚಿತ್ವ ಕಾಳಜಿಗೆ ಪೈನಗರ್ ವಿಷನ್ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುವುದು. ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಪೈವಳಿಕೆನಗರ ಶಾಲೆಯ ವಿದ್ಯಾರ್ಥಿಗಳು ಅಲ್ಪಕಾಲ ಈ ಕೈಂಕರ್ಯಕ್ಕೆ ಸಮಯ ಮೀಸಲಿಟ್ಟು ನಾಡಹಬ್ಬದ ದಿನ ಧನ್ಯತೆ ಮೆರೆದರು. ಕಸ ಹಾಕುವವರು ಒಬ್ಬರು ತೆಗೆಯುವವರು ಇನ್ನೊಬ್ಬರು ಎಂಬ ಮಾತು ಎಲ್ಲೋ ಕಿವಿಯಲ್ಲಿ ರಿಂಗಣಿಸಿದರೂ ಶಾಲಾ ಆವರಣ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.


ಪೈವಳಿಕೆನಗರ ಶಾಲೆಯಲ್ಲಿ ಸಂಭ್ರಮದ ಶಾಲಾ ಮಟ್ಟದ ಕ್ರೀಡಾ ಕೂಟ

ಪೈವಳಿಕೆನಗರ, .15 : ಪೈವಳಿಕೆನಗರ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ಕೂಟ ಅಕ್ಟೋಬರ್ 15 ಮತ್ತು 16ರಂದು ಜರಗಿತು. ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ ವಿಶ್ವನಾಥ ಅಮ್ಮೇರಿ ಧ್ವಜಾರೋಹಣ ನೆರವೇರಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಗೌರವವಂದನೆ ಸ್ವೀಕರಿಸಿದರು. ಕ್ರೀಡಾಕೂಟದ ಉದ್ಘಾಟನೆಯನ್ನು ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಅಮ್ಮೇರಿ ನೆರವೇರಿಸಿದರು. ಹಿರಿಯ ಶಿಕ್ಷಕರಾದ ಶ್ರೀ ರವೀಂದ್ರನಾಥ್ ಕೆ.ಆರ್. ಶುಭಾಶಂಸನೆ ಮಾಡಿದರು. ಶಾಲಾ ನಾಯಕಿ ಆಯಿಶತ್ ಫಾರಿಶಾ ಕ್ರೀಡಾ ಕೂಟದ ಪ್ರತಿಜ್ಞೆ ಬೋಧಿಸಿದರು. ಸತತ ಎರಡು ದಿನಗಳ ಕಾಲ ನಡೆದ ಕ್ರೀಡಾ ಕೂಟದಲ್ಲಿ ವಿವಿಧ ವಿಭಾಗಗಳಲ್ಲಾಗಿ ಸುಮಾರು 800ಕ್ಕಿಂತಲೂ ಅಧಿಕ ಪ್ರತಿಭೆಗಳು ಭಾಗವಹಿಸಿದ್ದರು. ಶುಕ್ರವಾರ ಅಪರಾಹ್ನ 4 ಗಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ ಪಿ ಬಹುಮಾನ ವಿತರಿಸಿದರು. ಆಚರಣಾ ಸಮಿತಿ ಸಂಚಾಲಕರಾದ ಶ್ರೀ ಉಣ್ಣಿಕೃಷ್ಣನ್ ಪಯ್ಯನ್ನೂರು ಉಪಸ್ಥಿತರಿದ್ದರು. ಎಸ್ ಆರ್ ಜಿ ಕನ್ವಿನರ್ ಶ್ರೀ ಕೃಷ್ಣಮೂರ್ತಿ ಎಂ. ಎಸ್ ಕಾರ್ಯಕ್ರಮ ನಡೆಸಿಕೊಟ್ಟರು.(ಪೈನಗರ್ ವಿಷನ್ ಕ್ರೀಡಾ ಲೋಕ ವರದಿ)

ವಿದ್ಯಾರ್ಥಿಗಳ ಕ್ರೀಡಾ ಉತ್ಸಾಹಕ್ಕೆ ಅಂಜಿ ಹಿಮ್ಮೆಟ್ಟಿದ ಮಳೆ, ಟ್ರ್ಯಾಕ್ ಅಫೀಶಿಯಲ್ಸ್ ಗಳಿಗೆ ನಿಟ್ಟುಸಿರು
ಪೈವಳಿಕೆನಗರ, .16 : ಈ ಬಾರಿಯ ಶಾಲಾ ಕ್ರೀಡಾ ಕೂಟಕ್ಕೆ ಮಂಗಳವಾರ ಹಾಗೂ ಬುಧವಾರದಂದು ಶಾಲಾ ಆಚರಣಾ ಸಮಿತಿ ವತಿಯಿಂದ ತಯಾರಿ ನಡೆಸಲಾಗುತ್ತಿತ್ತು. ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ ವಿಶ್ವನಾಥ ಅಮ್ಮೇರಿ ಅವರು ಕಳೆದ ಹಲವು ದಿನಗಳಿಂದ ಶಾಲೆಯಲ್ಲಿ ಕ್ರೀಡಾ ಕೂಟದ ಯಶಸ್ವಿಗೆ ಸನ್ಮನಸ್ಸಿನಿಂದ ಸ್ವಯಂಸೇವೆ ಸಲ್ಲಿಸಿ ಮಾರ್ಗದರ್ಶನ ನೀಡುತ್ತಿದ್ದರು. ಬುಧವಾರ ಬೆಳಗ್ಗೆಯೇ ಟ್ರ್ಯಾಕ್ ಹಾಕುವ ಕೆಲಸ ಆರಂಭವಾಗಿತ್ತು. 19 ಮತ್ತು 20ರಂದು ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳ ನಡೆಯುವ ಕಾರಣ ಹಲವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಈ ಸಂಭ್ರಮದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಆದರೂ ಇತರ ಉತ್ಸಾಹಿ ಶಿಕ್ಷಕರು ತಯಾರಿಯನ್ನು ಪೂರ್ತಿಗೊಳಿಸಿದರು. ಗುರುವಾರ ಬೆಳಗ್ಗೆ ವಿದ್ಯಾರ್ಥಿಗಳು ಕ್ರೀಡಾ ಸಂಭ್ರಮದಲ್ಲಿ ಭಾಗವಹಿಸಲು ಮುಂಜಾನೆಯೇ ಶಾಲಾ ಆವರಣಕ್ಕೆ ತಲುಪಿದ್ದರು. ಕ್ರೀಡಾ ಕೂಟದ ಆರಂಭದ ಮೊದಲು ವಿವಿಧ ಹೌಸ್ ಗಳ ಪರೇಡ್ ನಡೆಯಿತು. ವಿಶಾಲವಾದ ಮೈದಾನ ಕೂಡಾ ವಿದ್ಯಾರ್ಥಿಗಳ ಉತ್ಸಾಹಕ್ಕೆ ಸಾಕಾಗದಾಯಿತು. ಉರಿಬಿಸಿಲಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಫೀಶಿಯಲ್ಸ್ ಗಳಿಗೆ ಉಪಾಹಾರ ಸಮಿತಿ ಒದಗಿಸಿದ ಚಾ, ಬನ್, ಮಜ್ಜಿಗೆ ನೀರು ಉತ್ಸಾಹವನ್ನು ಇಮ್ಮಡಿಯಾಗಿಸಿತು. ಓಡಿ ಬಂದು ಏದುಸಿರು ಬಿಡುತ್ತಿದ್ದ ಕ್ರೀಡಾಪಟುಗಳಿಗೆ ಆಯಾ ಹೌಸ್ ಗಳ ಪ್ರತಿನಿಧಿಗಳು ನೀಡುತ್ತಿದ್ದ ಗ್ಲುಕೋಸ್ ಕ್ರೀಡಾ ಮನೋಭಾವಕ್ಕೆ ಉಲ್ಲಾಸ ತಂದಿತು. ವಿದ್ಯಾರ್ಥಿಗಳ ಈ ಉತ್ಸಾಹಕ್ಕೆ ಮಳೆಯೂ ಕರುಣೆಯನ್ನು ತೋರಿಸಿತು. ಕಳೆದ ವರ್ಷದ ಕ್ರೀಡಾ ಕೂಟದಲ್ಲಿ ಮಳೆ ಎರಡು ದಿನವೂ ಟ್ರ್ಯಾಕನ್ನು ತೊಳೆದು ಬಿಟ್ಟಿತ್ತು. ಎರಡನೇ ದಿನದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆದು ನೀಲಿ ಗುಂಪು ಪ್ರಥಮ, ಹಳದಿ ಗುಂಪು ದ್ವಿತೀಯ, ಕೆಂಪು ಗುಂಪು ತೃತೀಯ ಹಾಗೂ ಹಸಿರು ಗುಂಪು ಚತುರ್ಥ ಸ್ಥಾನ ಪಡೆಯಿತು.

ಉಪಜಿಲ್ಲಾ ರಸಪ್ರಶ್ನೆ ವಿಜೇತರು
ಉಪ್ಪಳ, .13 : ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಉಪ್ಪಳ ಬಿ.ಆರ್.ಸಿಯಲ್ಲಿ ಮಂಗಳವಾರ ನಡೆಯಿತು. ಯುಪಿ ವಿಭಾಗದ ಸ್ಪರ್ಧೆಯಲ್ಲಿ ಪೈವಳಿಕೆನಗರ ಶಾಲೆ ತೃತೀಯ ಸ್ಥಾನಗಳಿಸಿತು. 7ಎ ತರಗತಿಯ ಫಾತಿಮತ್ ಝೌರಾ ಮತ್ತು ಫಾತಿಮತ್ ರಿಹಾನಾ ಶಾಲೆಯನ್ನು ಪ್ರತಿನಿಧಿಸಿ ಭಾಗವಹಿಸಿದ್ದರು. ಧರ್ಮತ್ತಡ್ಕ ಶಾಲೆ ಪ್ರಥಮ ಸ್ಥಾನಗಳಿಸಿದ್ದರೆ ಕಳಿಯೂರು ಶಾಲೆ ಮತ್ತು ಪೈವಳಿಕೆನಗರ ಶಾಲೆ ದ್ವಿತೀಯ ಸ್ಥಾನಗಳಿಸಿತ್ತು. ಆದರೆ ಟೈ ಬ್ರೇಕರಿನಲ್ಲಿ ಪೈವಳಿಕೆನಗರ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಜಯಗಳಿಸಿದ ಫಾತಿಮತ್ ರಿಹಾನಾ ಮತ್ತು ಫಾತಿಮತ್ ಝೌರಾ ಪೈನಗರ್ ವಿಷನ್ ಪ್ರತಿನಿಧಿಗಳಾಗಿದ್ದಾರೆ. ವಿಜೇತರನ್ನು ಶಾಲಾ ಪಿಟಿಎ ಅಭಿನಂದಿಸಿದೆ.(ಪೈನಗರ್ ವಿಷನ್ ವಿಜ್ಞಾನ ಮೇಳ ವರದಿ)



ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲಾ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ

ಪೈವಳಿಕೆನಗರ, .9 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ರಕ್ಷಕ ಶಿಕ್ಷಕ ಸಂಘದ ಹಾಲಿ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಧಾಕೃಷ್ಣ ಮಾಸ್ತರ್ ಕಾಯರ್ ಕಟ್ಟೆ, ಶ್ರೀಮತಿ ಸರಿತಾ, ಶ್ರೀಮತಿ ರೋಹಿಣಿ, ಶ್ರೀ ಪದ್ಮನಾಭ, ಶ್ರೀ ಸುರೇಶ್ ಆಚಾರ್ಯ ಬಾಯಾರು, ಶ್ರೀ ಕೃಷ್ಣ ಪಿ, ಶ್ರೀ ಇಬ್ರಾಹೀಂ ಪಾವಲುಕೋಡಿ, ಶ್ರೀ ಇಬ್ರಾಹೀಂ ಪೈವಳಿಕೆ, ಶ್ರೀ ಅಹ್ಮದ್ ಹುಸೈನ್ ಮಾಸ್ತರ್ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ರೈನಾ ವಾರ್ಷಿಕ ವರದಿ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ ಪಿ ಲೆಕ್ಕಪತ್ರ ಮಂಡಿಸಿದರು. ನೂತನ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಶ್ರೀ ಲಾರೆನ್ಸ್ ಡಿಸೋಜಾ ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀ ಇಬ್ರಾಹೀಂ ಪಾವಲುಕೋಡಿ, ಸದಸ್ಯರಾಗಿ ಶ್ರೀ ಪದ್ಮನಾಭ ಬಾಯಿಕಟ್ಟೆ, ಶ್ರೀ ಮೂಸಾ ಕುಞ್ಞಿ, ಶ್ರೀ ಅಜಿತ್ ಪ್ರಸಾದ್, ಶ್ರೀ ರಾಧಾಕೃಷ್ಣ ಮಾಸ್ತರ್ ಕಾಯರ್ ಕಟ್ಟೆ, ಶ್ರೀ ಅಹ್ಮದ್ ಹುಸೈನ್ ಪಿ.ಕೆ, ಶ್ರೀ ಕೃಷ್ಣ ಪೈವಳಿಕೆ, ಶ್ರೀ ಮೂಸಾ ಫಿರ್ ದೋಸ್, ಶ್ರೀಮತಿ ಸರಸ್ವತಿ, ಶ್ರೀ ಇಬ್ರಾಹೀಂ ಪೈವಳಿಕೆ ಆಯ್ಕೆಯಾದರು. ಲೆಕ್ಕ ಪರಿಶೋಧಕರಾಗಿ ಶ್ರೀ ಇಬ್ರಾಹೀಂ ಮಾಸ್ಟರ್, ಶ್ರೀ ಉಮೇಶ್ ಚೇವಾರು ಆಯ್ಕೆಯಾದರು. ಮಾತೃ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಎಲಿಝಬೆತ್ ಸದಸ್ಯರಾಗಿ ಶ್ರೀಮತಿ ಮೈಮೂನಾ, ಶ್ರೀಮತಿ ರೋಹಿಣಿ, ಶ್ರೀಮತಿ ಜಯವಿಮಲ, ಶ್ರೀಮತಿ ಹೇಮಲತಾ ಆಯ್ಕೆಯಾದರು. ಗತ ವರ್ಷದ ಎಸ್ ಎಸ್ ಎಲ್ ಸಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರಗಳನ್ನು ನೀಡಿ ಗೌರವಿಸಲಾಯಿತು. ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ ಸ್ವಾಗತಿಸಿ, ಶಾಲಾ ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಧನ್ಯವಾದವಿತ್ತರು. ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀ ಕೃಷ್ಣಮೂರ್ತಿ ಎಂ.ಎಸ್ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸುಶ್ಮಿತಾ, ತನುಜಾ, ಅಕ್ಷತಾ, ಪ್ರಣೀತಾ ಪ್ರಾರ್ಥನೆ ಹಾಡಿದರು.


ಪೈವಳಿಕೆನಗರ ಶಾಲೆಯಲ್ಲಿ ಇನ್ನು ಉತ್ಸವಗಳ ಕಾಲ
ಪೈವಳಿಕೆನಗರ, .8 : ಗುರುವಾರ ಅಪರಾಹ್ನ ಹಯರ್ ಸೆಕೆಂಡರಿ ಇಂಪ್ರೂವ್ ಮೆಂಟ್ ಪರೀಕ್ಷೆಯು ಮುಗಿಯುವುದರೊಂದಿಗೆ ಉತ್ಸವಗಳ ಕಾಲವಾದ ಎರಡನೇ ಟರ್ಮ್ ಗೆ ಹಸಿರು ನಿಶಾನೆ ತೋರಿದಂತಾಗಿದೆ. ಶಾಲಾ ಮಟ್ಟದ ವಿಜ್ಞಾನ ಮೇಳ ಕಳೆದ ವಾರ ನಡೆದಿತ್ತು. ಈ ತಿಂಗಳ 19 ಮತ್ತು 20ರಂದು ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳ ಕುಂಜತ್ತೂರು ಶಾಲೆಯಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದ ವಿಜ್ಞಾನ ಮೇಳ ನವೆಂಬರ್ 16, 17ರಂದು ತ್ರಿಕರಿಪುರದಲ್ಲಿ ನಡೆಯಲಿದೆ. ಶಾಲಾ ಮಟ್ಟದ ಕ್ರೀಡಾಕೂಟ 15 ಮತ್ತು 16ಕ್ಕೆ ನಡೆಯಲಿದ್ದು ಉಪಜಿಲ್ಲಾ ಮಟ್ಟದ ಕ್ರೀಡಾಕೂಟ ನವೆಂಬರ್ 11, 12 ಮತ್ತು 13ರಂದು ಮಣ್ಣಂಗುಳಿ ಮೈದಾನದಲ್ಲಿ ನಡೆಯಲಿದೆ. ಶಾಲಾ ಮಟ್ಟದ ಕಲೋತ್ಸವಕ್ಕಾಗಿ ಶಾಲಾ ಉದ್ಯೋಗಿಗಳ ಸಂಘವು ಸಭೆ ಸೇರಿ ದಿನಾಂಕಗಳನ್ನು ನಿರ್ಧರಿಸಲಿದೆ. ನವರಾತ್ರಿ ಪ್ರಯುಕ್ತ ಕೇರಳ ರಾಜ್ಯ ಸರಕಾರ ಅಕ್ಟೋಬರ್ 21 ರಜೆ ಸಾರಿದ್ದು 26ಕ್ಕೆ ಶಾಲೆ ಪುನರಾರಂಭವಾಗಲಿದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆಗಳನ್ನು ಒರೆಗೆ ಹಚ್ಚಲು ತುದಿಗಾಲಲ್ಲಿ ಕಾಯುತ್ತಿದ್ದಾರೆ.

ಶಾಲಾ ಐಟಿ ಮೇಳ ವಿಜೇತರು
* ಐಟಿ ಲ್ಯಾಬ್ ನಲ್ಲಿ ನಡೆಯುತ್ತಿರುವ ಶಾಲಾ ಮಟ್ಟದ ಐಟಿ ಮೇಳದ ಹೈಸ್ಕೂಲ್ ವಿಭಾಗದ ಡಿಜಿಟಲ್ ಪೈಂಟಿಂಗ್ ಸ್ಪರ್ಧೆಯಲ್ಲಿ 8ಡಿ ತರಗತಿಯ ಆದರ್ಶ್ ಪ್ರಥಮ, 8ಎ ತರಗತಿಯ ಅಕ್ಷತಾ ದ್ವಿತೀಯ, 10ಸಿ ತರಗತಿಯ ಯತೀಶ್ ತೃತೀಯ ಸ್ಥಾನಗಳಿಸಿದ್ದಾರೆ. ಯುಪಿ ವಿಭಾಗದ ಡಿಜಿಟಲ್ ಪೈಂಟಿಂಗ್ ಸ್ಪರ್ಧೆಯಲ್ಲಿ 7ಎ ತರಗತಿಯ ಮೇಘಶ್ರೀ ಪ್ರಥಮ, 6ಎ ತರಗತಿಯ ಹರ್ಷಿತಾ ದ್ವಿತೀಯ, 7ಬಿ ತರಗತಿಯ ಅಲೀಮತ್ ಶಫಾ ತೃತೀಯ ಸ್ಥಾನಗಳಿಸಿದ್ದಾರೆ. ಯುಪಿ ವಿಭಾಗದ ಮಲಯಾಳಂ ಟೈಪಿಂಗ್ ನಲ್ಲಿ 7ಬಿ ತರಗತಿಯ ಅಲೀಮತ್ ಶಫಾ ಪ್ರಥಮ, 6ಬಿ ತರಗತಿಯ ಮಹ್ ರೂಫ್ ದ್ವಿತೀಯ, 6ಬಿ ತರಗತಿಯ ನಿಶ್ಮಿತಾ ತೃತೀಯ ಸ್ಥಾನಗಳಿಸಿದ್ದಾರೆ. ಹೈಸ್ಕೂಲ್ ವಿಭಾಗದ ಐಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ 8ತರಗತಿಯ ಧ್ವಾನಿಷ್ ಪ್ರಥಮ, 8ಸಿ ತರಗತಿಯ ವೈಭವಿ ದ್ವಿತೀಯ, 8ಡಿ ತರಗತಿಯ ಪ್ರಜ್ಞಾ. ಆರ್ ತೃತೀಯ ಸ್ಥಾನಗಳಿಸಿದ್ದಾರೆ. ಹೈಸ್ಕೂಲ್ ಕನ್ನಡ ಟೈಪಿಂಗ್ ನಲ್ಲಿ 8ಸಿ ತರಗತಿಯ ವೈಭವಿ ಪ್ರಥಮ, 8ಎ ತರಗತಿಯ ಅಕ್ಷತಾ ದ್ವಿತೀಯ, 8ಸಿ ತರಗತಿಯ ಫಾತಿಮತ್ ಸಹನ ತೃತೀಯ ಸ್ಥಾನಗಳಿಸಿದ್ದಾರೆ. ಯುಪಿ ವಿಭಾಗದ ಐಟಿ ರಸಪ್ರಶ್ನೆಯಲ್ಲಿ 7ಬಿ ತರಗತಿಯ ಪಹೀಮತ್ ಶಫಾ ಪ್ರಥಮ, 7ಸಿ ತರಗತಿಯ ಶಮೀಮಾ ನಸ್ರೀನ್ ದ್ವಿತೀಯ ಸ್ಥಾನಗಳಿಸಿದ್ದಾರೆ.



ಪೈವಳಿಕೆನಗರ ಶಾಲೆಯಲ್ಲಿ ಕಾಲುವಾರ್ಷಿಕ ಪರೀಕ್ಷೆಯ ವಸಂತಕಾಲ

ಪೈವಳಿಕೆನಗರ, ಸೆ.7: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಈಗ ಕಾಲುವಾರ್ಷಿಕ ಪರೀಕ್ಷೆಗಳ ಸುಗ್ಗಿ. ಕಾಲುವಾರ್ಷಿಕ ಪರೀಕ್ಷೆಗಳ ನಂತರ ಓಣಂ ರಜೆ ಇರುವುದು ಸಾಮಾನ್ಯ. ಆದರೆ ಈ ಬಾರಿ ಓಣಂ ಕಳೆದು ಪರೀಕ್ಷೆ ಆರಂಭವಾದದ್ದು ವಿದ್ಯಾರ್ಥಿಗಳ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ. ಸೆಪ್ಟೆಂಬರ್ 7ರಿಂದ 1ನೇ ತರಗತಿಯಿಂದ ಆರಂಭಿಸಿ ಪ್ಲಸ್ ಟು ತನಕದ ವಿದ್ಯಾರ್ಥಿಗಳೆಲ್ಲರೂ ಪರೀಕ್ಷಾ ಹಾಲಿನಲ್ಲಿ ತಮ್ಮ ಪ್ರೌಢಿಮೆಯನ್ನು ಪರೀಕ್ಷಿಸುವರು. ಮಂಗಳವಾರ 15ರಂದು ಪರೀಕ್ಷೆಗಳು ಮುಗಿಯಲಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟ ಹತ್ತನೇ ತರಗತಿಯ ಹಿಂದಿ ಪರೀಕ್ಷೆಯು ಸೆಪ್ಟೆಂಬರ್ 16 ಬುಧವಾರದಂದು ಪೂರ್ವಾಹ್ನ ನಡೆಯಲಿದೆ. ಸೆಪ್ಟೆಂಬರ್ 17ರಂದು ಗಣೇಶ ಚತುರ್ಥಿ ಪ್ರಯುಕ್ತ ಕಾಸರಗೋಡು ಜಿಲ್ಲಾಡಳಿತ ಜಿಲ್ಲೆಯಲ್ಲಿ ಸಾರ್ವಜನಿಕ ರಜೆ ಸಾರಿದೆ. ಸೆಪ್ಟೆಂಬರ್ 18ರಿಂದ ಎರಡನೇ ಟರ್ಮ್ ಆರಂಭಗೊಳ್ಳಲಿದ್ದು ಉತ್ಸವಗಳು ರಂಗೇರುವ ಸಮಯ ಸನ್ನಿಹಿತವಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಓಣಂ ಪರೀಕ್ಷೆಯ ಶುಭಾಶಯಗಳು.




ಪೈವಳಿಕೆನಗರ ಶಾಲೆಯಲ್ಲಿ ಗುರುಗಳಿಗಾಗಿ ಶಿಕ್ಷಕ ದಿನಾಚರಣೆಯ ಸಂಭ್ರಮ

ಪೈವಳಿಕೆನಗರ, ಸೆ.4: ಸೆಪ್ಟೆಂಬರ್ 4 ಅಧ್ಯಾಪಕ ದಿನಾಚರಣೆಯ ಮುನ್ನಾದಿನ ಪೈವಳಿಕೆನಗರ ಶಾಲೆಯಲ್ಲಿ ವಿವಿಧ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು. ಬೆಳಗ್ಗೆ 8ಸಿ ತರಗತಿಯ ವಿದ್ಯಾರ್ಥಿಗಳು ಪೈವಳಿಕೆನಗರ ಸರಕಾರಿ ಹಯರ್ ಸಕೆಂಡರಿ ಶಾಲೆಯ 1ನೇ ತರಗತಿಯಿಂದ ಮೊದಲ್ಗೊಂಡು ಪ್ಲಸ್ ಟು ವರೆಗಿನ ಎಲ್ಲಾ ಗುರುವೃಂದದವರಿಗೆ ಶುಭಾಶಯ ಪತ್ರ ಹಾಗೂ ಸಿಹಿತಿಂಡಿ ವಿತರಿಸಿ ಅಭಿಮಾನ ಮೆರೆದರು. 10ಬಿ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ವಿನೋದಾವಳಿಗಳನ್ನು ಆಯೋಜಿಸಿ ಕೇಕ್ ಹಂಚಿದರು. ಪ್ಲಸ್ ಟು ವಿಜ್ಞಾನ ವಿದ್ಯಾರ್ಥಿಗಳು ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೇಕ್ ಹಂಚಿ ಆಚರಿಸಿದರೆ ಇತರ ತರಗತಿಯವರು ಕೇಕ್ ತುಂಡುಮಾಡಿ ಹಂಚಿಬಿಟ್ಟರು. ಎಲ್ಲಾ ಶಿಕ್ಷಕ ಬಂಧುಗಳಿಗೆ ಪೈನಗರ್ ವಿಷನ್ ಬಳಗದ ಶಿಕ್ಷಕ ದಿನದ ಶುಭಾಶಯಗಳು. ಈ ಅಭಿಮಾನ, ಸಂಬಂಧ, ಅನುಬಂಧ ಎಂದೆಂದೂ ಹೀಗೆಯೇ ಇರಲಿ.

 
ಕೆಲವೇ ಮಹಾನುಭಾವರು

ಪೈವಳಿಕೆನಗರ, ಸೆ. 4: ಇತ್ತೀಚೆಗಿನ ದಿನಗಳಲ್ಲಿ ಹಬ್ಬ ಆಚರಣೆಗಳು ಸ್ವಂತಿಕೆಗಳನ್ನು ಕಳೆದುಕೊಂಡು ಫ್ಯಾಷನ್ ಆಗಿ ಬದಲಾಗುತ್ತಿರುವುದು ಎಲ್ಲರೂ ಗಮನಿಸಿದಂತಹ ವಿಚಾರ. ಶಿಕ್ಷಕರ ದಿನಾಚರಣೆ ಸರ್ವೇ ಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ನೆನಪಿಸುವ ದಿನ. ಇಂತಹ ದಿನಗಳಲ್ಲಿ ಹಲವು ಶಾಲೆಗಳಲ್ಲಿ ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ವಿವಿಧ ವಿನೋದಾವಳಿಗಳನ್ನು ನಡೆಸಿ ಮೋಜು ನೋಡುವುದು ದುರಂತವೇ ಸರಿ. ಇಂತಹ ಘಟನೆಗಳ ಮಧ್ಯೆ ಪೈವಳಿಕೆನಗರ ಶಾಲೆಯ 8ಎ ತರಗತಿಯ ವಿದ್ಯಾರ್ಥಿಗಳು ತಾವೇ ಶ್ರಮವಹಿಸಿ ಬರೆದ ಗ್ರೀಟಿಂಗ್ ಕಾರ್ಡ್ ಪೈನಗರ್ ವಿಷನ್ ಗೆ ಕಳಿಸಿಕೊಟ್ಟಿದ್ದಾರೆ. ""ನೀವು ನಮಗೆ ಅದೆಷ್ಟು ವಿಷಯ ವಿಚಾರಗಳನ್ನು ತಿಳಿಸಿಕೊಟ್ಟಿದ್ದೀರಿ. ನಿಮಗೆ ಹೇಗೆ ಧನ್ಯವಾದ ಹೇಳಬೇಕೆಂದು ತೋಚದಾಗಿದೆ. ನಿಮಗಾಗಿಯೇ ಮೀಸಲಿಟ್ಟ ಈ ದಿನದಂದು ನಾವು ನಿಮಗೆ ಈ ಶುಭಾಶಯ ಪತ್ರದ ಮೂಲಕ ಧನ್ಯವಾದವನ್ನು ಅರ್ಪಿಸುತ್ತಿದ್ದೇವೆ. ನಿಮಗೆ ಶಿಕ್ಷಕರ ದಿನದ ಶುಭಾಶಯಗಳು_ 8ಎ ತರಗತಿ'' ಕೆಲವು ವಿದ್ಯಾರ್ಥಿಗಳು ತಮ್ಮ ಅಭಿಮಾನವನ್ನು ತಿಳಿಸಲು ಶಿಕ್ಷಕರ ಶಿಕ್ಷಣ ಆಯುಧವಾದ ಕೆಂಪು ಶಾಯಿಯ ಪೆನ್ನನ್ನು ನೀಡಿ ಸಂತೋಷಿಸಿದರು. 9ಸಿ ತರಗತಿಯ ದುರ್ಗಾ ಪ್ರಸಾದ್ ಶಿಕ್ಷಕರ ಕಾಲಿಗೆರಗಿ ಆಶೀರ್ವಾದವನ್ನು ಪಡೆದು ಇತರ ವಿದ್ಯಾರ್ಥಿಗಳಿಗೆ ಮಾದರಿಯಾದನು.

 
ದ್ಯೋಗ ಭಡ್ತಿಗೊಂಡ ಪೈವಳಿಕೆನಗರ ಶಾಲಾ ಮುಖ್ಯೋಪಾಧ್ಯಾಯರಿಗೆ ಬೀಳ್ಕೊಡುಗೆ

ಪೈವಳಿಕೆನಗರ, ಸೆ.4 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಇದೀಗ ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ಯೋಜನಾಧಿಕಾರಿಯಾಗಿ ಭಡ್ತಿಗೊಂಡ ಶ್ರೀನಿವಾಸ ಭಟ್ ಕಾಡೂರು ಇವರನ್ನು ಶಾಲಾ ಉದ್ಯೋಗಿಗಳ ಸಂಘದ ವತಿಯಿಂದ ಶಾಲು ಹೊದೆಸಿ, ಫಲ ಪುಷ್ಪ ಸ್ಮರಣಿಕೆ ನೀಡಿ ಬೀಳ್ಕೊಡಲಾಯಿತು. 1985ರಲ್ಲಿ ಕುಂಜತ್ತೂರು ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಶ್ರೀಯುತರು 1987ರಲ್ಲಿ ಬೇಕೂರು ಶಾಲೆಗೆ ವರ್ಗಾವಣೆಗೊಂಡರು. ಅಲ್ಲಿ 8ವರ್ಷ ಸೇವೆ ಸಲ್ಲಿಸಿ 1995ರಲ್ಲಿ ಕಾಯರ್ ಕಟ್ಟೆ ಶಾಲೆಗೆ ವರ್ಗವಾದರು. 2009ರಲ್ಲಿ ಅಡೂರು ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇರ್ಪಡೆಗೊಂಡ ಶ್ರೀನಿವಾಸ ಭಟ್ ಅಡೂರು ಶಾಲೆಯ 80ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಉಪಜಿಲ್ಲಾ ಕಲೋತ್ಸವದ ನೇತೃತ್ವ ವಹಿಸಿದರು. 2010 ಎಪ್ರಿಲ್ ತಿಂಗಳಲ್ಲಿ ಪೈವಳಿಕೆನಗರ ಶಾಲೆಗೆ ವರ್ಗಾವಣೆಯಾದ ಶ್ರೀಯುತರು ಸರಳ ಸಜ್ಜನ ವ್ಯಕ್ತಿ. ಶಾಲಾ ವಿದ್ಯಾರ್ಥಿಗಳ ಜತೆಗೆ ವಾತ್ಸಲ್ಯದಿಂದ ಇರುವ ಶ್ರೀನಿವಾಸ ಸರ್ ಶಿಕ್ಷಕರ ರಕ್ಷಕರ ಜತೆಗೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದರು. ಕೃಷಿಯ ಬಗ್ಗೆ ಉತ್ತಮ ಒಲವನ್ನು ಹೊಂದಿದ ಇವರು ತಮ್ಮ ವ್ಯಕ್ತಿತ್ವದಿಂದ ಪೈವಳಿಕೆನಗರ ಶಾಲೆಯ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದು ಊರ ಜನರ ಪ್ರೀತಿ ಗಳಿಸಿದವರು. ಶಾಲಾ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ, ಜಿಲ್ಜೋ ಸರ್, ಸಂತೋಷ್ ಸರ್ , ಶ್ರೀಧರ ಸರ್, ರೈನಾ ಟೀಚರ್, ಸ್ವರ್ಣಲತಾ ಟೀಚರ್, ಅಹ್ಮದ್ ಹುಸೈನ್ ಮಾಸ್ಟರ್, ಅಬ್ದುಲ್ ರಹಿಮಾನ್ ಪೈವಳಿಕೆ ಮಾತನಾಡಿದರು. ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರನಾಥ್ ಕೆ.ಆರ್. ಸ್ವಾಗತಿಸಿ, ಸ್ಟಾಫ್ ಸೆಕ್ರೆಟರಿ ಶಶಿಕಲಾ ಟೀಚರ್ ವಂದಿಸಿದರು. ಎಸ್.ಆರ್.ಜಿ ಕನ್ವಿನರ್ ಕೃಷ್ಣಮೂರ್ತಿ ಎಂ.ಎಸ್. ನಿರೂಪಿಸಿದರು. ಸುಮಿತ್ರಾ ಟೀಚರ್ ಪ್ರಾರ್ಥನೆ ಹಾಡಿದರು.


 
ಕೈಯಾರಿನಲ್ಲಿ ನಡೆದ ಕಾಳುಮೆಣಸು ಕೃಷಿ ವಿಚಾರ ಸಂಕಿರಣ

ಕೈಯಾರು, ಸೆ. 3 ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಕೃಷಿ ಆಸಕ್ತ ವಿದ್ಯಾರ್ಥಿಗಳು ಗುರುವಾರ ಕೈಯಾರಿನಲ್ಲಿ ನಡೆದ ಕಾಳುಮೆಣಸು ಕೃಷಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು. ಪೈವಳಿಕೆನಗರ ಶಾಲೆಯ ವಿದ್ಯಾರ್ಥಿಗಳ ರೈತ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾಳುಮೆಣಸಿನ ವಿವಿಧ ತಳಿಗಳು, ಬೆಳೆಯುವ ವಿಧಾನ ಮುಂತಾದವುಗಳ ಬಗೆಗೆ ಮಾಹಿತಿ ಪಡೆದರು. ನಂತರ ಕೃಷಿ ಸ್ಥಳಗಳ ಸಂದರ್ಶನ ನಡೆಸಿದರು.

 
ಪೈವಳಿಕೆನಗರ ಶಾಲೆಯಲ್ಲಿ ಓಣಂ ರಜೆ ಕಳೆದು ಎರಡನೇ ಟರ್ಮ್ ಆರಂಭ
ಪೈವಳಿಕೆನಗರ, .30 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಓಣಂ ಆಚರಣೆ ವಿಜೃಂಭಣೆಯಿಂದ ನಡೆದು ರಜೆಯ ಮಜಾ ಸವಿದ ವಿದ್ಯಾರ್ಥಿಗಳು ಆಗಸ್ಟ್ 31ರಂದು ಶಾಲೆಗೆ ಹಿಂತಿರುಗುವರು. ಇದು ಎರಡನೇ ಟರ್ಮ್ ಆರಂಭದ ಸೂಚನೆಯಾಗಿರುವುದು. ಸೆಪ್ಟಂಬರ್ 7ರಿಂದ ಪ್ಲಸ್ ವನ್ ಹೊರತುಪಡಿಸಿದಂತೆ ಕಾಲುವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು 17ನೇ ತಾರೀಕು ಗಣೇಶ ಚತುರ್ಥಿ ಪ್ರಯುಕ್ತ ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯ ರಜೆಯಾಗಿರುವುದು. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 5ರ ತನಕ ಪ್ಲಸ್ ವನ್ ಇಂಪ್ರೂವ್ ಮೆಂಟ್ ಪರೀಕ್ಷೆಗಳು ನಡೆಯಲಿದೆ. ಎರಡನೇ ಟರ್ಮ್ ಉತ್ಸವಗಳ ಕಾಲವಾಗಿದ್ದು ಮೇಳಗಳು, ಕ್ರೀಡೋತ್ಸವ, ಕಲೋತ್ಸವ, ವಿದ್ಯಾರಂಗ ಸಾಹಿತ್ಯೋತ್ಸವ, ಪ್ರವಾಸ ಮುಂತಾದ ಕಾರ್ಯಕ್ರಮಗಳಿದ್ದು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲು ವಿನಂತಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಪೈನಗರ್ ವಿಷನ್ ಬಳಗದ ಪರೀಕ್ಷೆಯ ಶುಭಾಶಯಗಳು.

 
ಪೈವಳಿಕೆನಗರ ಶಾಲೆಯಲ್ಲಿ ಮಹಾಬಲಿಯೊಂದಿಗೆ ಸಂಭ್ರಮದ ಓಣಂ ಆಚರಣೆ

ಪೈವಳಿಕೆನಗರ, .21 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಓಣಂ ಆಚರಣೆ ವಿಜೃಂಭಣೆಯಿಂದ ನಡೆಯಿತು. ಎಲ್ ಪಿ, ಯುಪಿ , ಹೈಸ್ಕೂಲ್ ಮತ್ತು ಹಯರ್ ಸೆಕೆಂಡರಿ ವಿಭಾಗಗಳಲ್ಲಾಗಿ ಹೂ ರಂಗೋಲಿ ಸ್ಪರ್ಧೆ ನಡೆಯಿತು. 8ಸಿ ತರಗತಿಯ ವಿದ್ಯಾರ್ಥಿ ಕೌಶಿಕ್ ನ ಮಹಾಬಲಿಯ ವೇಷದಲ್ಲಿ ಚೆಂಡೆ, ತಾಳಗಳೊಂದಿಗೆ ಪೈವಳಿಕೆನಗರ ಪೇಟೆಯಲ್ಲಿ ಸಿಂಡಿಕೇಟ್ ಬ್ಯಾಂಕ್, ಕೆಎಸ್ ಇ ಬಿ, ಗ್ರಾಮ ಕಛೇರಿ ಸಂದರ್ಶನದೊಂದಿಗೆ ಮೆರವಣಿಗೆ ನಡೆಸಲಾಯಿತು. 10ನೇ ತರಗತಿಯ ಗುರುಕಿರಣ್ ಮತ್ತು ಕಿರಣ್ ಚೆಂಡೆಯಲ್ಲಿ ಸಹಕರಿಸಿದರು. ಮಧ್ಯಾಹ್ನ ಶಾಲಾ ಶಿಕ್ಷಕರು ಮತ್ತು ಶಿಕ್ಷಕಿಯರೇ ತಯಾರಿಸಿದ ವಿವಿಧ ಓಣಂ ಭಕ್ಷ್ಯಗಳಿಂದೊಡಗೂಡಿದ ಔತಣವನ್ನು ಏರ್ಪಡಿಸಲಾಗಿತ್ತು. ಪೈವಳಿಕೆ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಣಿಕಂಠ ರೈ, ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಭಟ್ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ, ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ, ಉಪಾಧ್ಯಕ್ಷರಾದ ಶ್ರೀ ಪದ್ಮನಾಭ ಬಾಯಿಕಟ್ಟೆ, ಮದರ್ ಪಿಟಿಎ ಅಧ್ಯಕ್ಷರಾದ ಶ್ರೀಮತಿ ರೋಹಿಣಿ, ಸದಸ್ಯರಾದ ಶ್ರೀ ಸುರೇಶ್ ಆಚಾರ್ಯ ಬಾಯಾರು, ಶ್ರೀ ಇಬ್ರಾಹೀಂ ಪೈವಳಿಕೆ, ಶ್ರೀ ಇಬ್ರಾಹೀಂ ಪಾವಲುಕೋಡಿ, ಶ್ರೀ ರಾಧಾಕೃಷ್ಣ ಮಾಸ್ಟರ್ ಕಾಯರ್ ಕಟ್ಟೆ, ಶ್ರೀಮತಿ ಸರಿತಾ ಮತ್ತಿತರರು ಉಪಸ್ಥಿತರಿದ್ದರು. ಓಣಂ ಆಚರಣಾ ಸಮಿತಿ ಸಂಚಾಲಕರಾದ ಶ್ರೀ ಉಣ್ಣಿಕೃಷ್ಣನ್ ನೇತೃತ್ವ ನೀಡಿದರು. ಎಸ್ ಆರ್ ಜಿ ಕನ್ವಿನರ್ ಕೃಷ್ಣಮೂರ್ತಿ ಎಂ.ಎಸ್ ಕಾರ್ಯಕ್ರಮ ನಿರೂಪಿಸಿದರು.
 
*ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಓಣಂ ಸಂಭ್ರಮಕ್ಕೆ ವಿವಿಧ ವಿನೋದಾವಳಿಗಳು ಮೆರುಗು ನೀಡಿದವು.ಎಲ್ ಪಿ ವಿಭಾಗದ ಸ್ಮರಣಶಕ್ತಿ ಸ್ಪರ್ಧೆಯವಲ್ಲಿ 3ಬಿ ತರಗತಿಯ ಮೊಹಮ್ಮದ್ ಶುಹೈಬ್ ಪ್ರಥಮ, 3ಬಿ ತರಗತಿಯ ಖದೀಜತ್ ಮುರ್ಶೀದಾ ದ್ವಿತೀಯ, ಯುಪಿ ರಂಗೋಲಿಯಲ್ಲಿ 7ಬಿ ಪ್ರಥಮ, 7ಎ ದ್ವಿತೀಯ, ಯುಪಿ ಹುಡುಗರ ಸಂಗೀತ ಕುರ್ಚಿಯಲ್ಲಿ ಲಕ್ಷ್ಮೀಶಾ 7ಸಿ ಪ್ರಥಮ, ಫಹದ್ 7ಸಿ ದ್ವಿತೀಯ, ಹುಡುಗಿಯರ ಸಂಗೀತ ಕುರ್ಚಿಯಲ್ಲಿ ಅನುಜ್ಞಾ 7ಎ ಪ್ರಥಮ, ಮಹರೂಫಾ 5ಬಿ ದ್ವಿತೀಯ, ಹೈಸ್ಕೂಲ್ ರಂಗೋಲಿಯಲ್ಲಿ 9ಪ್ರಥಮ, 10ಸಿ ದ್ವಿತೀಯ, ಶೂಟ್ ಔಟ್ ನಲ್ಲಿ 10ಎ ನೌಶಾದ್ ಪ್ರಥಮ, ಲಿಂಬೆ ಚಮಚ ಓಟದಲ್ಲಿ 8ಸಿ ತರಗತಿಯ ವೈಭವಿ ಪ್ರಥಮ, 10ಸಿ ತರಗತಿಯ ಜಯಶ್ರೀ ದ್ವಿತೀಯ, ಮದರಂಗಿಯಲ್ಲಿ 9ಸಿ ತರಗತಿಯ ಆಯಿಶತ್ ರಂಸೀನಾ ಮತ್ತು ಜ್ಯೋತಿ ಪ್ರಥಮ, 10ಬಿ ತರಗತಿಯ ಮರಿಯಮ್ಮತ್ ನೂರಾ ಮತ್ತು ಜಿಶಾನಾ ದ್ವಿತೀಯ, ಹಯರ್ ಸೆಕೆಂಡರಿ ರಂಗೋಲಿಯಲ್ಲಿ ಪ್ಲಸ್ ಟು ವಿಜ್ಞಾನ ಪ್ರಥಮ, ಪ್ಲಸ್ ಟು ಮಾನವಿಕ ದ್ವಿತೀಯ, ನೀರು ತುಂಬಿಸುವ ಸ್ಪರ್ಧೆಯಲ್ಲಿ ಪ್ಲಸ್ ಟು ಮಾನವಿಕ ವಿಭಾಗದ ದೀಕ್ಷಾ ಪ್ರಥಮ, ಶ್ರುತಿ ದ್ವಿತೀಯ, ಹುಡುಗಿಯರ ಹಗ್ಗ ಜಗ್ಗಾಟದಲ್ಲಿ ಪ್ಲಸ್ ಟು ಮಾನವಿಕ ವಿಭಾಗ ಪ್ರಥಮ, ಹುಡುಗರ ಹಗ್ಗ ಜಗ್ಗಾಟದಲ್ಲಿ ಪ್ಲಸ್ ಟು ವಾಣಿಜ್ಯಾ ವಿಭಾಗ ಪ್ರಥಮ, ಕ್ಯಾಂಡಲ್ ಉರಿಸುವುದರಲ್ಲಿ ನಿಹಾಲಾ ಪ್ರಥಮ, ಶ್ರೇಯಾ ದ್ವಿತೀಯ, ಗೋಣಿಚೀಲ ಓಟದಲ್ಲಿ ಜಾಫರ್ ಪ್ರಥಮ, ಬಾತಿಷಾ ದ್ವಿತೀಯ ಸ್ಥಾನಗಳಿಸಿದ್ದಾರೆ. ಜಯಗಳಿಸಿದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪೈನಗರ್ ವಿಷನ್ ಬಳಗದ ತುಂಬು ಹೃದಯದ ಅಭಿನಂದನೆಗಳು.

*ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಓಣಂ ಆಚರಣೆಯು ಹಲವು ವಿಶೇಷಗಳ ಕೇಂದ್ರವಾಗಿತ್ತು. ಮಧ್ಯಾಹ್ನದ ಓಣಂ ಔತಣವನ್ನು ತಯಾರಿಸುವ ಸಂಪೂರ್ಣ ಹೊಣೆಯನ್ನು ಹೊತ್ತು ಕೊಂಡದ್ದು ಸಮಿತಿ ಸಂಚಾಲಕರಾದ ಶ್ರೀ ಉಣ್ಣಿಕೃಷ್ಣನ್ ಪಯ್ಯನ್ನೂರ್. ಗುರುವಾರ ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು ಅಭಿಮಾನದಿಂದ ಮನೆಗಳಿಂದ ಬಾಳೆಎಲೆ ಮತ್ತು ತೆಂಗಿನಕಾಯಿ ಪ್ರವಾಹವನ್ನೇ ಹರಿಸಿದರು. ಎಲ್ ಪಿ ವಿಭಾಗದ 3ಎ ತರಗತಿಯು ಅಡುಗೆ ಸಾಮಾಗ್ರಿಗಳಿಂದ ಭರ್ತಿಯಾಯಿತು. ಸ್ವಯಂಸೇವಕರಾಗಿ ಮುಂದೆ ಬಂದ ವಿದ್ಯಾರ್ಥಿಗಳು ಗುರುವಾರ ಅಪರಾಹ್ನದಿಂದಲೇ ಕಾರ್ಯ ಪ್ರವೃತ್ತರಾಗಿದ್ದರು. ಅಡುಗೆಗಾಗಿ ಬಂದಂತಹ ಪಾತ್ರೆಗಳನ್ನು ಶುಚಿಗೊಳಿಸುವುದು, ಎಲೆಗಳನ್ನು ಓರಣವಾಗಿಡುವುದು, ತೆಂಗಿನಕಾಯಿ ತುರಿಯುವುದು, ತರಕಾರಿಗಳನ್ನು ಜೋಡಿಸುವುದು ಮುಂತಾದ ಕೆಲಸಗಳಿಗೆ ಪೈವಳಿಕೆನಗರ ಸಾಕ್ಷಿಯಾಯಿತು. ಅಪರಾಹ್ನ 6.00ಗಂಟೆಗೆ ಸ್ವಯಂಸೇವಕ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಚಹಾ ವಿತರಿಸಲಾಯಿತು.ನಂತರ ಆರಂಭವಾದದ್ದು ಅಡುಗೆಯ ಕೆಲಸಗಳು. ಹಿರಿಯ ಶಿಕ್ಷಕರಾದಿಯಾಗಿ ಹೆಚ್ಚಿನ ಶಾಲಾ ಸಿಬಂದಿಗಳು ತರಕಾರಿ ಹೆಚ್ಚುವ, ಅಡುಗೆಯ ಕೆಲಸದಲ್ಲಿ ಮಗ್ನರಾದರು. ಸುಮಾರು 9.30ರ ಹೊತ್ತಿಗಾಗಲೆ ತರಕಾರಿ ಹೆಚ್ಚುವ ಕೆಲಸ ಮುಗಿಯಿತು. ಈ ಕಾರ್ಯದಲ್ಲಿದ್ದ ಶಾಲಾ ಸಿಬ್ಬಂದಿಗಳಿಗೆ ರಾತ್ರಿಯ ಊಟವನ್ನು ಕರೀಂ ಮಾಸ್ಟರ್ ಏರ್ಪಡಿಸಿದ್ದರು. ರಾತ್ರಿ 10ಗಂಟೆಯ ನಂತರ ಪಾಕಶಾಲೆಯು ಜೀವಂತವಾದಂತೆ ತೋರಿತು. ವಿವಿಧ ಭಕ್ಷ್ಯಗಳನ್ನು ಬೆಳಗಿನ ಮೊದಲು ತಯಾರಿಸುವುದು ಸಮಿತಿಯ ಉದ್ದೇಶವಾಗಿತ್ತು. ನಿದ್ದೆಗೆಟ್ಟು ಕಾರ್ಯನಿರ್ವಹಿಸಿದ ಶಿಕ್ಷಕರಿಗೆ ರಾತ್ರಿ 11ಗಂಟೆಯಲ್ಲಿ ವಿದ್ಯುತ್ ಕೈಕೊಟ್ಟು ಓಣಂ ಔತಣ ತಯಾರಿಗೆ ಸವಾಲು ಹಾಕಿತು. ಆದರೂ ಛಲಬಿಡದ ಶಿಕ್ಷಕರು ಟಾರ್ಚ್ ಬೆಳಕನ್ನು ಆಶ್ರಯಿಸಿದರು. ಇಷ್ಟು ಸಾಲದೆಂಬಂತೆ ಮುಂಜಾನೆ 2 ಗಂಟೆಯ ಸುಮಾರಿಗೆ ಸುರಿದ ಬಿರುಸಿನ ಮಳೆಯು ಹೊರಗಡೆ ಹಾಕಿದ್ದ ತೆರೆದ ಒಲೆಗೆ ಆಕ್ರಮಣ ಮಾಡಿತು. ಹಾರೆ ಗುದ್ದಲಿಗಳನ್ನು ಉಪಯೋಗಿಸಿ ಈ ಆಕ್ರಮಣವನ್ನು ಸಮರ್ಥವಾಗಿ ನಿಭಾಯಿಸಿದ ಶಿಕ್ಷಕರು ಒಲೆಯಲ್ಲಿದ್ದ ಭಕ್ಷ್ಯ ಪೂರ್ತಿಯಾಗಿ ಬೇಯಲು ಹರಸಾಹಸಪಟ್ಟರು. ನಂತರ ಅಲ್ಪಕಾಲ ಅಡುಗೆ ಮನೆಯ ಪರಿಸರದಲ್ಲಿ ಗಾಳಿಮಳೆಯ ಸದ್ದಿನೊಂದಿಗೆ ಬೆಂಚುಗಳಲ್ಲಿ ನಿದ್ದೆ ಹೋದರೂ ಮುಂಜಾನೆ ಏಳಬೇಕಾದ್ದು ಅನಿವಾರ್ಯವಾಯಿತು. ಬೆಳಗ್ಗೆಯಿಂದಲೇ ಅನ್ನ ಮತ್ತು ಪಾಯಸದ ತಯಾರಿ. ಅಡುಗೆಯ ಕರ್ತವ್ಯದ ಮಧ್ಯೆ ಬೆಳಗಿನ ಉಪಾಹಾರಕ್ಕೂ ಕತ್ತರಿ. ಕಾರ್ಯಕ್ರಮ ಮುಗಿದ ಬಳಿಕವಷ್ಟೇ ಮನಶಾಂತಿ. ಸ್ವಯಂಸೇವಕರಿಗೆ ಪೈನಗರ್ ವಿಷನ್ ಪರವಾಗಿ ಧನ್ಯವಾದಗಳು

ಪೈವಳಿಕೆನಗರ, 21: ಓಣಂ ಆಚರಣೆಯ ಶುಭ ಸಂದರ್ಭದಲ್ಲಿ ಪೈವಳಿಕೆನಗರಶಾಲೆಯ ಆವರಣದೊಳಗೆ ಮಾವೇಲಿ ನಾಮಾಂಕಿತ ಮಹಾಬಲಿ ಚಕ್ರವರ್ತಿ ಪ್ರತ್ಯಕ್ಷಗೊಂಡದ್ದು ಕುತೂಹಲಕ್ಕೆ ಕಾರಣವಾಗಿತ್ತು. ಓಣಂ ಪಾಕಶಾಲೆಯ ಸಮೀಪದಿಂದ ಚೆಂಡೆಮೇಳ, ಹುಲಿ ಕರಡಿ ವೇಷಗಳೊಂದಿಗೆ ಆರಂಭಗೊಂಡ ಘೋಷಯಾತ್ರೆ ಪೈವಳಿಕೆ ಪೇಟೆಯಲ್ಲಿ ಸಾಗಿತು. ಪಂಚಾಯತ್ ಕಛೇರಿ ಆವರಣ, ಅಂಚೆಕಛೇರಿ, ಸಿಂಡಿಕೇಟ್ ಬ್ಯಾಂಕ್, ವಿದ್ಯುತ್ ಕಚೇರಿ, ಗ್ರಾಮಕಚೇರಿ ಸಂದರ್ಶನದೊಂದಿಗೆ ಶಾಲಾ ಆವರದಲ್ಲಿ ಸಮಾರೋಪವಾಯಿತು. 8ಸಿ ತರಗತಿಯ ಕೌಶಿಕ್ ಮಾವೇಲಿಯಾಗಿ ಮನಸೆಳೆದರೆ 10ಬಿ ತರಗತಿಯ ಗುರುಕಿರಣ್, 10ಸಿ ತರಗತಿಯ ಕಿರಣ್ ತಂಡದವರಿಂದ ಚೆಂಡೆಮೇಳ ಆಕರ್ಷಕವಾಯಿತು. ವಿವಿಧ ವಿದ್ಯಾರ್ಥಿಗಳು ಧರಿಸಿದ ಹುಲಿ, ಕರಡಿ ವೇಷಗಳು ಮೆರವಣಿಗೆಗೆ ಕಳೆ ತಂದರು.

*ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಓಣಂ ಕಾರ್ಯಕ್ರಮದಲ್ಲಿ ಓಣಂ ಔತಣ ಎಲ್ಲರ ಗಮನಸೆಳೆಯಲು ಕಾರಣವಾಯಿತು. ಎಲ್ ಪಿ ವಿಭಾಗದ ಕಟ್ಟಡದಲ್ಲಿ ನಾಲ್ಕು ಕಡೆ ಔತಣದ ವ್ಯವಸ್ಥೆಯನ್ನು ಮಾಡಲಾಗಿತ್ತು. ಎಲ್ಲಾ ದಿನಗಳಲ್ಲಿ ಬಟ್ಟಲುಗಳಲ್ಲಿ ಮಧ್ಯಾಹ್ನದೂಟ ಸವಿಯುತ್ತಿದ್ದ ವಿದ್ಯಾರ್ಥಿಗಳು ಇಂದು ಬಾಳೆಎಲೆ ಊಟದ ಪಂಕ್ತಿಭೋಜನದ ಸವಿಯನ್ನು ಪಡೆದರು. ಶಾಲಾ ಆಡಳಿತ ಮಂಡಳಿಯ ವಿಶೇಷ ಆಹ್ವಾನದ ಮೇರೆಗೆ ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಣಿಕಂಠ ರೈಯವರು ಸಮಾರಂಭಕ್ಕೆ ಆಗಮಿಸಿದ್ದರು. ಪಿಟಿಎ ಪದಾಧಿಕಾರಿಗಳೂ ಸದಸ್ಯರೂ ಹಳೆ ವಿದ್ಯಾರ್ಥಿಗಳೂ ವಿದ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಿದರು. ವಿದ್ಯಾರ್ಥಿ ಸ್ವಯಂಸೇವಕರು ಎಲ್ಲೂ ಗೊಂದಲವುಂಟಾಗದಂತೆ ಸರಾಗ ಔತಣದ ವ್ಯವಸ್ಥೆಗೆ ಶಿಕ್ಷಕರೊಂದಿಗೆ ಸಹಕರಿಸಿದರು. ಮಧ್ಯಾಹ್ನ 12ಗಂಟೆಗೆ ಆರಂಭಗೊಂಡ ಭೋಜನ 2ಗಂಟೆಯವರೆಗೆ ನಡೆಯಿತು. ರಕ್ಷಿತ್ 8ಸಿ, ಮೋಹನ 9ಸಿ, ಚಂದ್ರ 9ಎ ಮೊದಲಾದ ಹಲವು ವಿದ್ಯಾರ್ಥಿಗಳು ಮೊದಲಿನ ದಿನದಿಂದಲೇ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿ ಓಣಂ ಔತಣದ ಪಾತ್ರೆಗಳ ಶುಚೀಕರಣ ನಡೆಸಿ ಅಪರಾಹ್ನ 5ಗಂಟೆಯ ನಂತರವೇ ತೆರಳಿದ್ದು ಇವರ ಅರ್ಪಣಾ ಮನೋಭಾವಕ್ಕೆ ಸಾಕ್ಷಿಯಾಯಿತು. ಓಣಂ ಆಚರಣೆ ಸಂದರ್ಭದಲ್ಲಿ ಸ್ವಯಂಸೇವಕರಾಗಿ ಸಹಕರಿಸಿದ ಎಲ್ಲಾ ಸನ್ಮನಸ್ಸಿನ ವಿದ್ಯಾರ್ಥಿಗಳಿಗೆ ಪೈನಗರ್ ವಿಷನ್ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವುದು. ಈ ಕಾರ್ಯ ಕ್ರಮಕ್ಕೆ ಧನಸಹಾಯ ನೀಡಿದ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲಾ ಉದ್ಯೋಗಿಗಳ ಸಂಘಕ್ಕೆ ಪೈನಗರ್ ವಿಷನ್ ಬಳಗದ ತುಂಬು ಹೃದಯದ ಧನ್ಯವಾದಗಳು.

*ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಓಣಂ ಸಂಭ್ರಮವನ್ನು ವಿವಿಧ ವರ್ಷಗಳ ಹೂ ರಂಗೋಲಿಗಳು ಹೆಚ್ಚಿಸಿದ್ದವು. ವರ್ಷಾವಧಿಯ ತರಗತಿ ರಂಗೋಲಿಗಳ ಬದಲಿಗೆ ಈ ಬಾರಿ ಹಾಲ್ ನಲ್ಲಿ ರಂಗೋಲಿ ಸ್ಪರ್ಧೆ ನಡೆಸಲಾಗಿತ್ತು. ಸ್ಪರ್ಧೆಗೆ 10 ವಿದ್ಯಾರ್ಥಿಗಳನ್ನು ಸೀಮಿತಗೊಳಿಸಿದ ಕಾರಣ ಸ್ಪರ್ಧೆ ಸುಸೂತ್ರವಾಗಿ ನಡೆಯಿತು. ಆದರೆ ವಿದ್ಯಾರ್ಥಿಗಳು ಅಭಿಮಾನದಿಂದ ಮನೆಗಳಿಂದ ತಂದಿದ್ದ ಓಣಂ ಹಣತೆಗಳನ್ನು ಕೆಲವು ವಿಘ್ನ ಸಂತೋಷಿ ವಿದ್ಯಾರ್ಥಿಗಳು ಕಿಟಿಕಿ ಮೂಲಕ ಕಲ್ಲೆಸೆದು ಹಾನಿಗೊಳಿಸಿದ್ದು ತಮಗೆ ಬೇಸರ ತಂದಿದೆ ಎಂದು ವಿದ್ಯಾರ್ಥಿಗಳು ಪೈನಗರ್ ವಿಷನ್ ಪ್ರತಿನಿಧಿಗಳಲ್ಲಿ ತಿಳಿಸಿದ್ದಾರೆ. ಹೈಸ್ಕೂಲ್ ವಿಭಾಗದಲ್ಲಿ ಮದರಂಗಿ ಸ್ಪರ್ಧೆಯು ವಿದ್ಯಾರ್ಥಿಗಳ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಯಿತು. ಹಯರ್ ಸೆಕೆಂಡರಿ ವಿಭಾಗದ ಹುಡುಗರ ಮತ್ತು ಹುಡುಗಿಯರ ಹಗ್ಗ ಜಗ್ಗಾಟ ಓಣಂ ಸಂಬ್ರಮಾಚರಣೆಗೆ ಹೊಸತನವನ್ನು ನೀಡಿತು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಬಾಳೆಗೊನೆ ಬಹುಮಾನವಾಗಿ ನೀಡಿದ್ದು ತುಸು ನಗುವಿಗೆ ಕಾರಣವಾಯಿತು. ಹಲವು ಸಂಭ್ರಮ, ಆವೇಶದೊಂದಿಗೆ ಮುಂದುವರಿದ ಹಬ್ಬಾಚರಣೆಯು ಸುಮಾರು 4 ಗಂಟೆಯ ಹೊತ್ತಿಗೆ ಬಹುಮಾನ ವಿತರಣೆಯೊಂದಿಗೆ ಸಮಾರೋಪವಾಯಿತು. ಓಣಂ ರಜೆಯ ಸಂತಸದಲ್ಲಿ ವಿದ್ಯಾರ್ಥಿಗಳು ಮನೆಗಳಿಗೆ ತೆರಳಿದರು.

ಪೈವಳಿಕೆನಗರ ಶಾಲೆಯಲ್ಲಿ ಹಯರ್ ಸೆಕೆಂಡರಿ ನೂತನ ಕಟ್ಟಡದ ಶಿಲಾನ್ಯಾಸ


ಪೈವಳಿಕೆನಗರ, .20 : ಕಾಸರಗೋಡು ಡೆವಲಪ್ ಮೆಂಟ್ ಪ್ಯಾಕೇಜ್ ವತಿಯಿಂದ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಗೆ ಮಂಜೂರಾದ ತರಗತಿ ಕಟ್ಟಡದ ಶಿಲಾನ್ಯಾಸವನ್ನು ಮಂಜೇಶ್ವರ ಶಾಸಕರಾದ ಶ್ರೀ ಪಿ.ಬಿ ಅಬ್ದುಲ್ ರಝಾಕ್ ನೆರವೇರಿಸಿದರು. ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಣಿಕಂಠ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲೋಕ್ ಪಂಚಾಯತ್ ಉಪಾಧ್ಯಾಕ್ಷರಾದ ಶ್ರೀ ಹರ್ಷಾದ್ ವರ್ಕಾಡಿ, ಪೈವಳಿಕೆ ಗ್ರಾಮ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ದೇವು ಮೂಲ್ಯ, ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅಬುಸಾಲಿ, ಶ್ರೀಮತಿ ಕುಞ್ಞಾಲಿಮ್ಮ, ಶ್ರೀಮತಿ ಜಯಲಕ್ಷ್ಮೀ ಭಟ್, ಇಂಜಿನಿಯರ್ ರವಿಕುಮಾರ್ , ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ, ಮದರ್ ಪಿಟಿಎ ಅಧ್ಯಕ್ಷೆ ಶ್ರೀಮತಿ ರೋಹಿಣಿ ಶುಭಾಶಂಸನೆಗೈದರು. ಎಕ್ಸಿಕ್ಯುಟಿವ್ ಎಂಜಿನಿಯರ್ ಶ್ರಿ ಪಿ.ಕೆ ಬಾಬು ವರ್ಕ್ ರಿಪೋರ್ಟ್ ಮಂಡಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀನಿವಾಸ ಭಟ್ ಸ್ವಾಗತಿಸಿ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ ವಂದಿಸಿದರು. ಎಸ್ ಆರ್ ಜಿ ಕನ್ವಿನರ್ ಶ್ರೀ ಕೃಷ್ಣಮೂರ್ತಿ ಎಂ.ಎಸ್. ನಿರೂಪಿಸಿದರು.







ಪೈವಳಿಕೆನಗರ,.15 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ 69ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅಬುಸಾಲಿಯವರು ರಾಷ್ಟ್ರಧ್ವಜವನ್ನು ಹಾರಿಸಿ ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀನಿವಾಸ ಭಟ್, ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ, ಪಿಟಿಎ ಅದ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ, ಪಿಟಿಎ ಕಾರ್ಯಕಾರಿ ಸಮಿತಿಯ ಶ್ರೀ ಇಬ್ರಾಹೀಂ ಪಾವಲುಕೋಡಿ, ಶ್ರೀ ಇಬ್ರಾಹೀಂ ಪೈವಳಿಕೆ, ಹಿರಿಯ ಶಿಕ್ಷಕರಾದ ಶ್ರೀ ರವೀಂದ್ರನಾಥ ಕೆ.ಆರ್ ಉಪಸ್ಥಿತರಿದ್ದರು. ಶಾಲಾ ಪಿಟಿಎ ವತಿಯಿಂದ ಲಡ್ಡು ಹಾಗೂ ಪೈವಳಿಕೆ ಗ್ರಾಮ ಪಂಚಾಯತ್ ವತಿಯಿಂದ ಮಿಠಾಯಿ ವಿತರಿಸಲಾಯಿತು. ನಂತರ ಶಾಲಾ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ ಮುಖ್ಯ ಅತಿಥಿಯಾಗಿದ್ದರು. ಸ್ಟಾಫ್ ಸೆಕ್ರೆಟರಿ ಶ್ರೀಮತಿ ಶಶಿಕಲಾ , ಎಸ್.ಆರ್.ಜಿ ಕನ್ವಿನರ್ ಕೃಷ್ಣಮೂರ್ತಿ ಎಂ.ಎಸ್, ಸಮಾಜ ವಿಜ್ಞಾನ ಕ್ಲಬ್ ನ ಶ್ರೀ ಅಬ್ದುಲ್ ಲತೀಫ್, ಶಾಲಾ ವಿದ್ಯಾರ್ಥಿ ನಾಯಕಿ ಆಯಿಶತ್ ಫಾರಿಶಾ ಶುಭಾಶಂಸನೆಗೈದರು. ಯುಪಿ ಶಿಕ್ಷಕರಾದ ಶ್ರೀ ಪ್ರಶಾಂತ್ ಕುಮಾರ್ ಅಮ್ಮೇರಿ ನಿರ್ದೇಶನದ ಸರ್ವ ಧರ್ಮ ಸಮಾನತೆಯನ್ನು ಬಿಂಬಿಸುವ ಮೂಕಾಭಿನಯ ಹಾಗೂ ಜವಾಹರಲಾಲ್ ನೆಹರು, ಕಿತ್ತೂರ ರಾಣಿ ಚೆನ್ನಮ್ಮ, ಮಹಾತ್ಮಾ ಗಾಂಧಿ, ಜಾನ್ಸೀ ರಾಣಿ ಲಕ್ಷ್ಮೀಬಾಯಿ, ತಾಂತಿಯಾ ಟೋಪಿ, ಸುಭಾಷ್ ಚಂದ್ರ ಬೋಸ್, ಬ್ರಿಟಿಷ್ ಸೈನಿಕರು, ರೈತರು, ಆದಿವಾಸಿಗಳನ್ನೊಳಗೊಂಡ ಸ್ವಾತಂತ್ರ್ಯ ಹೋರಾಟದ ವಿದ್ಯಾರ್ಥಿಗಳ ಕಿರುನಾಟಕ 'ಕ್ರಾಂತಿ ಕಹಳೆ' ಪ್ರದರ್ಶನಗೊಂಡಿತು. ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ದೇಶಭಕ್ತಿಗೀತೆ, ಭಾಷಣ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಶಿಕ್ಷಕಿಯರಾದ ಶ್ರೀಮತಿ ಸುಮಿತ್ರಾ, ಕುಮಾರಿ ವತ್ಸಲಾ, ಕವಿತಾ, ಗುಲಾಬಿ, ಗೋಪಣ್ಣ ಕುರುಡಪದವು, ಬಾಲಕೃಷ್ಣ ಕಾಯರ್ ಕಟ್ಟೆ, ಅಬ್ದುಲ್ ಕರೀಂ.ಪಿ.ಕೆ, ಪ್ರವೀಣ್ ಕನಿಯಾಲ, ಸಹಕರಿಸಿದರು. ಆಚರಣಾ ಸಮಿತಿ ಸಂಚಾಲಕರಾದ ಶ್ರೀ ಶ್ರೀಧರ ಭಟ್ ಬೀಡುಬೈಲು ಸ್ವಾಗತಿಸಿ ಹಯರ್ ಸೆಕೆಂಡರಿ ವಿಭಾಗದ ಶ್ರೀ ನಾರಾಯಣ ರಾವ್ ವಂದಿಸಿದರು.


*ಪೈವಳಿಕೆನಗರ ಶಾಲೆಯಲ್ಲಿ ಸಂಭ್ರಮದ ಹಿಂದಿ ದಿನಾಚರಣೆ
ಪೈವಳಿಕೆನಗರ, ಜು.31 : ಹಿಂದಿ ಸಾಹಿತ್ಯ ಸಾಮ್ರಾಟ್ ಪ್ರೇಮಚಂದ್ ಅವರ 135ನೇ ಹುಟ್ಟುಹಬ್ಬವನ್ನು ಪೈವಳಿಕೆನಗರ ಶಾಲೆಯಲ್ಲಿ ಹಿಂದಿ ದಿವಸವಾಗಿ ಆಚರಿಸಲಾಯಿತು. ಉತ್ತರಪ್ರದೇಶದ ವಾರಣಾಸಿಯ ಲಮ್ಹಿ ಗ್ರಾಮದಲ್ಲಿ 1880ರಲ್ಲಿ ಜನಿಸಿದ ಪ್ರೇಮಚಂದ್ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಶಾಲಾ ಮಾಧ್ಯಮ ಕೇಂದ್ರದಲ್ಲಿ ಅಪರಾಹ್ನ 1.30ಕ್ಕೆ ಆರಂಭವಾದ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀನಿವಾಸ ಭಟ್ ಉದ್ಘಾಟಿಸಿದರು. ಹಿರಿಯ ಅಧ್ಯಾಪಕರಾದ ಶ್ರೀ ರವೀಂದ್ರನಾಥ ಕೆ.ಆರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀ ಕೃಷ್ಣಮೂರ್ತಿ ಎಂ.ಎಸ್, ಶ್ರೀ ಅಬ್ದುಲ್ ಲತೀಫ್, ಶ್ರೀ ಜಿಲ್ಜೋ ಎನ್ ಶುಭಾಶಂಸನೆಗೈದರು. ನಿಖಿಲ್, ದೀಪಿಕಾ, ಕಾರ್ತಿಕ್ ಮತ್ತು ತಸ್ಮೀರಾ ತಂಡದವರಿಂದ ಪ್ರೇಮಚಂದ್ ಅವರ ಸೇವಾಸದನ್ ಸಂಬಂಧಿಸಿದ ಒಂದು ಕಿರುನಾಟಕ ಪ್ರದರ್ಶನಗೊಂಡಿತು. ಮಶೂರಾ, ನಸೀರಾ, ನಫೀಸತ್ ಮಿಸ್ರಿಯಾ, ಹರ್ಷಿತಾ, ರಮ್ಯ, ಪ್ರಣೀತಾ, ದೀಕ್ಷಿತಾ, ಉನೈರಾ, ವೈಭವಿ, ಅಕ್ಷತಾ, ನಿಧೀಶಾ, ಸಿಯಾನಾ, ಸಿನಾನ್, ತಮೀಝಾ, ಉನೈಸಾ, ಸಹನಾ ಮೊದಲಾದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಹಿಂದಿ ಶಿಕ್ಷಕರಾದ ಶ್ರೀ ರಾಜು.ಎ ಸ್ವಾಗತಿಸಿ ಹಿಂದಿ ಕ್ಲಬ್ ಸದಸ್ಯೆ ತನುಜಾ ವಂದಿಸಿದರು. ಹಿಂದಿ ಕ್ಲಬ್ ಸಂಚಾಲಕಿ ಜ್ಯೋತಿ. ಬಿ. ಕಾರ್ಯಕ್ರಮ ನಿರೂಪಿಸಿದರು. ರಜಿತಾ ಟೀಚರ್ ನೇತೃತ್ವ ನೀಡಿದರು.(ವರದಿ: ಜ್ಯೋತಿ.ಬಿ 9ಸಿ ಹಿಂದಿ ಕ್ಲಬ್ ಕನ್ವಿನರ್)


*8ಸಿ ತರಗತಿಯ ಸಾಹಿತ್ಯಸಭೆ
ಪೈವಳಿಕೆನಗರ, ಜು.30: 8ಸಿ ತರಗತಿಯಲ್ಲಿ ಪುರುಷೋತ್ತಮರವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಭೆ ನಡೆಯಿತು. ಅಕ್ಷಯ್, ಕಾರ್ತಿಕ್ ಮತ್ತು ಉಮರ್ ಫಾರೂಖ್ ಇವರಿಂದ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳು ನಡೆದವು. ಶಾಫಿ, ಆಹ್ ರಾಝ್, ರಕ್ಷಿತ್, ಸೌಮ್ಯ ಬಳಗದವರು ಹಾಡನ್ನು ಹಾಡಿ ಮನರಂಜಿಸಿದರು. ಝುಬೈರ್ ಸ್ವಾಗತಿಸಿ, ಖಲಂದರ್ ಶಾಫಿ ವಂದಿಸಿದರು. ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು.


*ಮಿಸೈಲ್ ಮಾನವ ಅಬ್ದುಲ್ ಕಲಾಂ ಅವರಿಗೆ ಪೈವಳಿಕೆನಗರ ಶಾಲೆಯ ಆದರಾಂಜಲಿ
ಪೈವಳಿಕೆನಗರ, ಜು. 28: ಮಾಜಿ ರಾಷ್ಟ್ರಪತಿ ಡಾ.ಎಪಿ.ಜೆ ಅಬ್ದುಲ್ ಕಲಾಂ ಅವರು ಇನ್ನಿಲ್ಲ. ಪತ್ರಿಕೆ ಹಂಚುವ ಕೆಲಸ ಮಾಡಿ ಬದುಕು ಆರಂಭಿಸಿದ ಕಲಾಂ ಅವರ ವ್ಯಕ್ತಿತ್ವ ವಿಜ್ಞಾನಿಯಾಗಿ, ಮಿಸೈಲ್ ರಂಗದ ನಾಯಕನಾಗಿ ಭಾರತದ ಹೆಸರನ್ನು ವಿಶ್ವವೇ ಅಚ್ಚರಿಯಿಂದ ನೆನಪಿಸುವಂತೆ ಮಾಡಿದ್ದು ವಿಶೇಷ. ಕಲಾಂ ಅವರ ಅಗಲಿಕೆ ದೇಶಕ್ಕೆ ದೊಡ್ಡ ನಷ್ಟ. ಅವರ ಅಗಲಿಕೆಗೆ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆ ಸಂತಾಪ ಸೂಚಿಸುವುದು. ಮಂಗಳವಾರ ವಿಶೇಷ ಅಸೆಂಬ್ಲಿ ಯಲ್ಲಿ ಕಲಾಂ ಅವರ ಸಾಧನೆಗಳ ಬಗ್ಗೆ ತಿಳಿಸಲಾಯಿತು. ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ, ಪ್ರಿನ್ಸಿಪಾಲ್ ಶ್ರೀ ಜೋರ್ಜ್ ಜೋಸೆಫ್, ಅಬ್ದುಲ್ ಲತೀಫ್, ಜಿಲ್ಜೋ ಎನ್ ಮಾತನಾಡಿದರು. ಸಂತಾಪ ಸೂಚಿಸಲು ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು. ನಂತರ ಶಾಲಾ ಮಾಧ್ಯಮ ಕೇಂದ್ರದಲ್ಲಿ ಶಾಲಾ ಇಂಗ್ಲೀಷ್ ಕ್ಲಬ್ ನ ವತಿಯಿಂದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗಾಗಿ ಕಲಾಂ ಅವರ ಬದುಕನ್ನು ಪ್ರತಿಬಿಂಬಿಸುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.


*ಮುಳಿಗದ್ದೆ ಬೆರಿಪದವು ಮೋರಿ ಸಂಕ ಕುಸಿತ ವಾಹನ ಸಂಚಾರ ಸ್ಥಗಿತ
ಪೈವಳಿಕೆನಗರ, ಜು.24: ಬಾಯಾರು ಮುಳಿಗದ್ದೆ - ಬೆರಿಪದವು ರಸ್ತೆಯ ಪೆರ್ವೋಡಿ ಬಳಿ ಮೋರಿ ಸಂಕ ಕುಸಿದು ಬಿದ್ದುದರಿಂದ ಈ ರೂಟಿನಲ್ಲಿ ವಾಹನ ಸಂಚಾರ ಸ್ಥಗಿತವಾಗಿದ್ದು ಪ್ರಯಾಣಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಬುಧವಾರ ಸಂಜೆ ಸಮಯದಲ್ಲಿ ಸಂಕ ಕುಸಿದ ಕಾರಣ ಈ ದಾರಿಯಾಗಿ ಎಲ್ಲಾ ವಾಹನಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು. ನಂತರ ಪೆರ್ಲ ಕಡೆಗೆ ಸಂಚರಿಸುವ ಬಸ್ ಗಳು ಕನಿಯಾಲ ದಾರಿಯಾಗಿ ಸಾಗುತ್ತಿದ್ದರೂ ಸಮಯ ಕ್ರಮೀಕರಣ ಮತ್ತು ಪ್ರಯಾಣಿಕರ ಕೊರತೆ ಅನುಭವಿಸುವಂತಾಗಿತ್ತು. ಇದರಿಂದಾಗಿ ಬಹುಪಾಲು ಶಾಲಾ ವಿದ್ಯಾರ್ಥಿಗಳು ಕಷ್ಟ ಅನುಭವಿಸುವಂತಾಗಿತ್ತು. ಶುಕ್ರವಾರ ಬೆಳಗ್ಗೆ ಸರ್ವೀಸ್ ನಡೆಸಿದ ಕೆಲವು ಬಸ್ ಗಳು ಅಪರಾಹ್ನ ಪ್ರಯಾಣಿಕರ ಕೊರತೆಯಿಂದಾಗಿ ಸರ್ವೀಸ್ ನಿಲುಗಡೆಗೊಳಿಸಿದ್ದವು. ಇದರಿಂದಾಗಿ ಪೈವಳಿಕೆನಗರ ಶಾಲೆಗೆ ತಲುಪಿದ ಹಲವು ವಿದ್ಯಾರ್ಥಿಗಳು ಮನೆಗೆ ಹಿಂದಿರುಗಲು ಪರದಾಡುವಂತಾಯಿತು. ಆಗ ಶಾಲಾ ಕಛೇರಿಯಲ್ಲಿ ಕರ್ತವ್ಯನಿರತರಾಗಿದ್ದ ಉಪಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಸರ್ ವಿದ್ಯಾರ್ಥಿಗಳನ್ನು ವಿಶೇಷ ವಾಹನಗಳಲ್ಲಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದರು. ಇದರಿಂದಾಗಿ ಆತಂಕ ಮನೆಮಾಡಿದ್ದ ಹಲವು ವಿದ್ಯಾರ್ಥಿ - ವಿದ್ಯಾರ್ಥಿನಿಯರ ಮುಖದಲ್ಲಿ ಸಂತಸದ ಭಾವ ಮೂಡಿತು. ಉಪಪ್ರಾಂಶುಪಾಲರ ಈ ಕರ್ತವ್ಯ ಪ್ರಜ್ಞೆಗೆ ಹಾಗೂ ಸೇವಾ ಮನೋಭಾವಕ್ಕೆ ಪೈನಗರ್ ವಿಷನ್ ನ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುವುದು.

*ಚಾಂದ್ರದಿನ ವಿಶೇಷ ಕೊಲಾಶ್ ಫಲಿತಾಂಶ ಪ್ರಕಟ
ಪೈವಳಿಕೆನಗರ, ಜು.24: ಚಾಂದ್ರ ದಿನಕ್ಕೆ ಸಂಬಂಧಿಸಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲಾ ವಿಜ್ಞಾನ ಕ್ಲಬ್ ನಡೆಸಿದ ಕೊಲಾಶ್ ಸ್ಪರ್ಧೆಯಲ್ಲಿ 10ಬಿ ತರಗತಿಯನ್ನು ಪ್ರತಿನಿಧಿಸಿ ರಚಿಸಿದ ಕೊಲಾಶ್ ಪ್ರಥಮ ಸ್ಥಾನವನ್ನು ತನ್ನ್ನದಾಗಿಸಿಕೊಂಡಿದೆ. 9ಎ ತರಗತಿಯನ್ನು ಪ್ರತಿನಿಧಿಸಿದ ಕೊಲಾಶ್ ದ್ವಿತೀಯ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಎರಡೂ ಕೊಲಾಶ್ ಗಳು ಆಕರ್ಷಕವಾಗಿದ್ದವು ಮತ್ತು ಒಂದನ್ನೊಂದು ಮೀರಿಸುವಂತಿದ್ದವು ಎಂದು ಫಲಿತಾಂಶವನ್ನು ಪೈನಗರ್ ವಿಷನ್ ಗೆ ಪ್ರಕಟಿಸಿದ ವಿಜ್ಞಾನ ಕ್ಲಬ್ ಕಾರ್ಯದರ್ಶಿ ಕೃಷ್ಣಮೂರ್ತಿ ಸರ್ ತಿಳಿಸಿದ್ದಾರೆ. ಜಯಗಳಿಸಿದ 10ಬಿ ಮತ್ತು 9ಎ ತರಗತಿಗೆ ಹಾಗೂ ಭಾಗವಹಿಸಿದ ಎಲ್ಲರಿಗೂ ಪೈನಗರ್ ವಿಷನ್ ಪರವಾಗಿ ತುಂಬು ಹೃದಯದ ಧನ್ಯವಾದಗಳು.

*ಪ್ಲಸ್ ವನ್ ಫಲಿತಾಂಶ ಪ್ರಕಟ
ಪೈವಳಿಕೆನಗರ, ಜು. 22 ಹಯರ್ ಸೆಕೆಂಡರಿ ವಿಭಾಗದ ಪ್ರಥಮ ವರ್ಷದ ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗಿದೆ. ಇಂಪ್ರೂವ್ ಮೆಂಟ್/ಸಪ್ಲಿಮೆಂಟರಿ ಪರೀಕ್ಷೆ ಸಪ್ಟಂಬರ್ 1ರಿಂದ 8ರವರೆಗೆ ನಡೆಯಲಿದೆ. ಒಬ್ಬ ವಿದ್ಯಾರ್ಥಿಗೆ ಗರಿಷ್ಟ ಮೂರು ವಿಷಯಗಳನ್ನು ಇಂಪ್ರೂವ್ ಮೆಂಟ್ ಬರೆಯಬಹುದು ಎಂದು ಹಯರ್ ಸೆಕೆಂಡರಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.



ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಬಂಧ ಸ್ಪರ್ಧೆ ವಿಜೇತರು

ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಸಮಾಜವಿಜ್ಞಾನ ಕ್ಲಬ್ ನಡೆಸಿದ ಪ್ರಬಂಧ ಸ್ಪರ್ಧೆಯ ಫಲಿತಾಂಶವನ್ನು ಕ್ಲಬ್ ಕಾರ್ಯದರ್ಶಿ ಶ್ರೀ ಅಬ್ದುಲ್ ಲತೀಫ್ ಅವರು ಪೈನಗರ್ ವಿಷನ್ ಗೆ ನೀಡಿದ್ದಾರೆ. ಹೈಸ್ಕೂಲು ಕನ್ನಡ ವಿಭಾಗದಲ್ಲಿ ಜನಸಂಖ್ಯಾ ಹೆಚ್ಚಳ ವರವೋ ಶಾಪವೋ ಎಂಬ ವಿಷಯದಲ್ಲಿ 10ಸಿ ತರಗತಿಯ ಅಂಕಿತ್ ಪ್ರಥಮ, 8ಎ ತರಗತಿಯ ಧ್ವಾನಿಷ್ ದ್ವಿತೀಯ, 9ಸಿ ತರಗತಿಯ ಉನೈರಾ ತೃತೀಯ ಸ್ಥಾನಗಳಿಸಿದರು. ಮಲಯಾಳ ವಿಭಾಗದಲ್ಲಿ 10ಬಿ ತರಗತಿಯ ಆಯಿಶತ್ ಶಾಮಿನಾ ಪ್ರಥಮ, 9ಬಿ ತರಗತಿಯ ಖದೀಜತ್ ಮಸೂರಾ ದ್ವಿತೀಯ ಸ್ಥಾನಗಳಿಸಿದರು. ಯುಪಿ ವಿಭಾಗದ ಸ್ಪರ್ಧೆಯಲ್ಲಿ 7ಸಿ ತರಗತಿಯ ಶಮೀಮಾ ನಸ್ರೀನ್ ಪ್ರಥಮ, 7ಎ ತರಗತಿಯ ಅಲೀಮತ್ ಝರೀನಾ ದ್ವಿತೀಯ, 7ಎ ತರಗತಿಯ ವರಿಷ್ಮಾ ತೃತೀಯ ಸ್ಥಾನಗಳಿಸಿದರು.


ಧ್ವಾನಿಷ್ ಪೈನಗರ್ ವಿಷನ್ ವಿದ್ಯಾರ್ಥಿ ಸಂಪಾದಕ
ಪೈವಳಿಕೆನಗರ : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಪ್ರಪ್ರಥಮ ಆನ್ ಲೈನ್ ಮತ್ತು ಮುದ್ರಿತ ವಿದ್ಯಾರ್ಥಿ ಸುದ್ದಿ ಪತ್ರಿಕೆಯಾಗಿ ಅತೀ ಹೆಚ್ಚು ಓದುಗರನ್ನು ಹೊಂದಿ ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಪೈನಗರ್ ವಿಷನ್ ಪತ್ರಿಕೆಯ ಈ ವರ್ಷದ ಸಂಪಾದಕನಾಗಿ 8ಎ ತರಗತಿಯ ಧ್ವಾನಿಷ್ ಆಯ್ಕೆಯಾಗಿದ್ದಾನೆ. ಓರ್ವ ಉತ್ತವ ಕಥೆಗಾರನೂ, ಕವಿಯೂ, ಲೇಖಕನೂ , ಚಿತ್ರಗಾರನೂ ಆಗಿರುವ ಧ್ವಾನಿಷ್ ನ ಹಲವು ರಚನೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕಳೆದ ವರ್ಷದ ಗಣಿತ ರಸಪ್ರಶ್ನೆಯಲ್ಲಿ ಮಂಜೇಶ್ವರ ಉಪಜಿಲ್ಲೆಯಲ್ಲಿ ಪ್ರಥಮ ಸ್ಥಾನಪಡೆದ ಕೀರ್ತಿ ಈತನದು. ಕಳೆದ ವರ್ಷ ಚೆರ್ಕಳ ಸೆಂಟ್ರಲ್ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ವಿದ್ಯಾರಂಗ ಸಾಹಿತ್ಯೋತ್ಸವದಲ್ಲಿ ಯುಪಿ ವಿಭಾಗದ ಕವಿತಾರಚನೆಯಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು ಪೈವಳಿಕೆನಗರ ಶಾಲೆಯ ಹೆಸರನ್ನು ಜಿಲ್ಲಾ ಮಟ್ಟದಲ್ಲಿ ಬೆಳಗಿದ ಧ್ವಾನಿಷ್ ಉತ್ತಮ ಸಂಘಟಕನಾಗಿರುವನು. ತನ್ನ ಉತ್ತಮ ವ್ಯಕ್ತಿತ್ವದಿಂದ ಅಪಾರ ಸ್ನೇಹಿತರ ಬಳಗವನ್ನು ಹೊಂದಿದ ಧ್ವಾನಿಷ್ ಈ ವರ್ಷದ ಪತ್ರಿಕೆಯ ಚುಕ್ಕಾಣಿ ಹಿಡಿಯಲಿದ್ದಾನೆ.

ಪೈನಗರ್ ವಿಷನ್ ಗೆ ನೂತನ ಸಾರಥಿಗಳು
ಪೈವಳಿಕೆನಗರ ವಿದ್ಯಾರ್ಥಿ ಮಾಧ್ಯಮಗಳ ಪೈಕಿ ನಂಬರ್ ವನ್ ಎನಿಸಿಕೊಂಡಿರುವ ಪೈನಗರ್ ವಿಷನ್ ಈ ಬಾರಿಯ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ. 8ಎತರಗತಿಯ ಧ್ವಾನಿಷ್ ಸಂಪಾದಕ, 8ಡಿ ತರಗತಿಯ ಕಾರ್ತಿಕ್, 8ಎ ತರಗತಿಯ ಅಕ್ಷತಾ, 7ಸಿ ತರಗತಿಯ ರಕ್ಷಣ್ ರೈ, 7ಎ ತರಗತಿಯ ಫಾತಿಮತ್ ಝೌರಾ ಸಹಾಯಕ ಸಂಪಾದಕರಾಗಿ ಆಯ್ಕೆಯಾಗಿದ್ದಾರೆ. ಎಲ್ ಪಿ ಬ್ಯೂರೋಗೆ 7ಎ ತರಗತಿಯ ಫಾತಿಮತ್ ತಾಹಿರಾ, ಯುಪಿ ಬ್ಯೂರೋ 7ಸಿ ತರಗತಿಯ ಶ್ರಜ್ಞಾ, ಎಚ್ ಎಸ್ ಬ್ಯೂರೋ 8ಸಿ ತರಗತಿಯ ವೈಭವಿ ಕೆ.ಆರ್, ಎಚ್ಎಸ್ಎಸ್ ಬ್ಯೂರೋ 10ಸಿ ತರಗತಿಯ ವಿಶಾಲ್ ಕುಮಾರ್ ಆಯ್ಕೆಯಾಗಿದ್ದಾರೆ. ಎಲ್ ಪಿ ಪ್ರಸಾರಕ್ಕೆ 6ಸಿ ತರಗತಿಯ ಫಾತಿಮತ್ ಆಸ್ಮಾ, 7ಎ ತರಗತಿಯ ಫಾತಿಮತ್ ರಿಹಾನಾ, ಯುಪಿ ಪ್ರಸಾರಕ್ಕೆ 7ಸಿ ತರಗತಿಯ ಮಹೇಶ್ ಮತ್ತು ಧನುಷ್ ಕುಮಾರ್, ಎಚ್ ಎಸ್ ಪ್ರಸಾರಕ್ಕೆ 9ಎ ತರಗತಿಯ ನವಾಸ್ ಮತ್ತು ಕಾರ್ತಿಕ್, ಎಲ್ ಪಿ ಸಂಕೀರ್ಣ ಭಿತ್ತಿಪತ್ರಿಕೆಗೆ 8ಸಿ ತರಗತಿಯ ಧೀರಜ್ ಮತ್ತು ಅಕ್ಷಯ್, ಎಚ್ ಎಸ್ ಸಂಕೀರ್ಣ ಭಿತ್ತಿ ಪತ್ರಿಕೆಗೆ 8ಡಿ ತರಗತಿಯ ಕಾರ್ತಿಕ್ ಮತ್ತು 8ಎ ತರಗತಿಯ ವೈಶಾಕ್ ಪ್ರಸಾರಕರಾಗಿ ಆಯ್ಕೆಯಾಗಿದ್ದಾರೆ. ತರಗತಿ ಪ್ರತಿನಿಧಿಗಳಾಗಿ ಸಂದೇಶ್ 1, ಯಜ್ಞೇಶ್ 2, ಅಭಿನಂದನ್ ಕುಮಾರ್ 3, ಅಭಿನಂದನ್ 4, ಜಿತೇಶ್ 5, ಮನೀಷ್ 6, ಸಾತ್ವಿಕ್ 6ಸಿ, ಫಾತಿಮತ್ ತಾಹಿರಾ 7, ಮೊಹಮ್ಮದ್ ರೌಫ್ 7ಸಿ, ವೈಶಾಕ್ 8, ವೈಭವಿ 8ಸಿ, ಪ್ರಜ್ಞಾ 8ಡಿ, ನವಾಸ್ 9, ಪ್ರಜ್ವಲ್ 9ಸಿ, ನಿಖಿಲ್ 10, ಅಂಕಿತ್ 10ಸಿ ಆಯ್ಕೆಯಾಗಿದ್ದಾರೆ. ವರದಿಗಾರರಾಗಿ ಅಬ್ದುಲ್ ಫತಾಹ್ 10, ರಜಿತ್ ಕುಮಾರ್ 10, ಮೊಹಮ್ಮದ್ ನವಾಸ್ 10ಸಿ, ಮರಿಯಮ್ಮ 8ಡಿ, ಸ್ವಪ್ನಾ 8ಡಿ, ಫಾತಿಮತ್ ಸಹನಾ 8ಸಿ, ಕಾರ್ತಿಕ್ 8ಸಿ, ಶಬೀರಾ 10, ಫಾತಿಮತ್ ರೈಹಾನಾ 10, ಆಯಿಷತ್ ಅಬ್ನಾ 10ಎ ಆಯ್ಕೆಯಾಗಿದ್ದಾರೆ.

8ಸಿ ತರಗತಿಯ ಸಾಹಿತ್ಯ ಸಭೆ
ಪೈವಳಿಕೆನಗರ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ 8ಸಿ ತರಗತಿಯ ಈ ವಾರದ ಸಾಹಿತ್ಯ ಸಭೆಯು ಜುಲೈ 16 ಗುರುವಾರ ತರಗತಿಯಲ್ಲಿ ನಡೆಯಿತು. ಉಮರ್ ಫಾರೂಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಹನ ಮತ್ತು ಬಳಗದವರು ಇಂಗ್ಲೀಷ್ ಪದ್ಯವನ್ನು ಹಾಡಿ ಎಲ್ಲರ ಮನರಂಜಿಸಿದರು. ರಕ್ಷಿತ್ ವಿವಿಧ ಅಭಿನಯಗಳನ್ನು ಮಾಡಿ ತೋರಿಸಿದರು. ಖಲಂದರ್ ಶಾಫಿಯವರು ಸುಂದರವಾದ ಹಾಡನ್ನು ಹಾಡಿದರು. ಅಹ್ ರಾಸ್ ಮಿಮಿಕ್ರಿ ಮಾಡಿದರು. ಶಿವಕುಮಾರ್ ಸ್ವಾಗತಿಸಿ, ಅಹ್ ರಾಸ್ ಧನ್ಯವಾದವಿತ್ತರು. ಧೀರಜ್ ನಿರೂಪಿಸಿದರು. ಕೌಶಿಕ್ ಪ್ರಾರ್ಥನೆ ಹಾಡಿದರು.(ವರದಿ ವೈಭವಿ ಕೆ.ಆರ್ 8ಸಿತರಗತಿ)


ಧ್ವಾನಿಷ್ ಪೈನಗರ್ ವಿಷನ್ ವಿದ್ಯಾರ್ಥಿ ಸಂಪಾದಕ
ಪೈವಳಿಕೆನಗರ : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಪ್ರಪ್ರಥಮ ಆನ್ ಲೈನ್ ಮತ್ತು ಮುದ್ರಿತ ವಿದ್ಯಾರ್ಥಿ ಸುದ್ದಿ ಪತ್ರಿಕೆಯಾಗಿ ಅತೀ ಹೆಚ್ಚು ಓದುಗರನ್ನು ಹೊಂದಿ ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಪೈನಗರ್ ವಿಷನ್ ಪತ್ರಿಕೆಯ ಈ ವರ್ಷದ ಸಂಪಾದಕನಾಗಿ 8ಎ ತರಗತಿಯ ಧ್ವಾನಿಷ್ ಆಯ್ಕೆಯಾಗಿದ್ದಾನೆ. ಓರ್ವ ಉತ್ತವ ಕಥೆಗಾರನೂ, ಕವಿಯೂ, ಲೇಖಕನೂ , ಚಿತ್ರಗಾರನೂ ಆಗಿರುವ ಧ್ವಾನಿಷ್ ನ ಹಲವು ರಚನೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕಳೆದ ವರ್ಷದ ಗಣಿತ ರಸಪ್ರಶ್ನೆಯಲ್ಲಿ ಮಂಜೇಶ್ವರ ಉಪಜಿಲ್ಲೆಯಲ್ಲಿ ಪ್ರಥಮ ಸ್ಥಾನಪಡೆದ ಕೀರ್ತಿ ಈತನದು. ಕಳೆದ ವರ್ಷ ಚೆರ್ಕಳ ಸೆಂಟ್ರಲ್ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ವಿದ್ಯಾರಂಗ ಸಾಹಿತ್ಯೋತ್ಸವದಲ್ಲಿ ಯುಪಿ ವಿಭಾಗದ ಕವಿತಾರಚನೆಯಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು ಪೈವಳಿಕೆನಗರ ಶಾಲೆಯ ಹೆಸರನ್ನು ಜಿಲ್ಲಾ ಮಟ್ಟದಲ್ಲಿ ಬೆಳಗಿದ ಧ್ವಾನಿಷ್ ಉತ್ತಮ ಸಂಘಟಕನಾಗಿರುವನು. ತನ್ನ ಉತ್ತಮ ವ್ಯಕ್ತಿತ್ವದಿಂದ ಅಪಾರ ಸ್ನೇಹಿತರ ಬಳಗವನ್ನು ಹೊಂದಿದ ಧ್ವಾನಿಷ್ ಈ ವರ್ಷದ ಪತ್ರಿಕೆಯ ಚುಕ್ಕಾಣಿ ಹಿಡಿಯಲಿದ್ದಾನೆ.

*ವಿಜ್ಞಾನ ಸಂಘದಿಂದ ವಿಜ್ಞಾನ ರಸಪ್ರಶ್ನೆ
ಪೈವಳಿಕೆನಗರ, ಜೂ.26 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ವಿಜ್ಞಾನ ಕ್ಲಬ್ ನ ವತಿಯಿಂದ ಜೂನ್ 26 ಶುಕ್ರವಾರದಂದು ಅಪರಾಹ್ನ ವಿಜ್ಞಾನ ರಸಪ್ರಶ್ನೆ 8ಡಿ ತರಗತಿಯಲ್ಲಿ ನಡೆಯಿತು. 10ಬಿ ತರಗತಿಯ ಆಯಿಷತ್ ಶಾಮಿನಾ ಪ್ರಥಮ, 10ಬಿ ತರಗತಿಯ ಆದಿಲತ್ ರಸ್ವೀನಾ ದ್ವಿತೀಯ, 10 ಬಿ ತರಗತಿಯ ಆತಿಕಾ ಸಾಜಿದಾ ತೃತೀಯ ಸ್ಥಾನಗಳಿಸಿದರು. ವಿಜೇತರಿಗೆ ಪೈನಗರ್ ವಿಷನ್ ಬಳಗದ ತುಂಬು ಹೃದಯದ ಅಭಿನಂದನೆಗಳು. ವಿಜ್ಞಾನ ಸಂಘದ ಕೃಷ್ಣಮೂರ್ತಿ ಎಂ. ಎಸ್, ಸಂತೋಷ್ ಸಹಕರಿಸಿದರು.


*ಕನ್ನಡ ಸಂಘದಿಂದ ಸಾಹಿತ್ಯ ರಸಪ್ರಶ್ನೆ
ಪೈವಳಿಕೆನಗರ, ಜೂ. 26 :ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಕನ್ನಡ ಸಂಘದ ವತಿಯಿಂದ ಜೂನ್ 26 ಶುಕ್ರವಾರದಂದು ಅಪರಾಹ್ನ ಕನ್ನಡ ಸಾಹಿತ್ಯ ರಸಪ್ರಶ್ನೆ 9ಎ ತರಗತಿಯಲ್ಲಿ ಜರಗಿತು. 8ಡಿ ತರಗತಿಯ ಕಾರ್ತಿಕ್ ಪ್ರಥಮ ಹಾಗೂ 10ಎ ತರಗತಿಯ ನಿಖಿಲ್ ದ್ವಿತೀಯ ಸ್ಥಾನಗಳಿಸಿದರು. ಕನ್ನಡ ಸಂಘದ ರೈನಾ ಟೀಚರ್ , ಶಶಿಕಲಾ ಟೀಚರ್ , ಸುಮಿತ್ರಾ ಟೀಚರ್, ಪ್ರಶಾಂತ್ ಕುಮಾರ್ ಅಮ್ಮೇರಿ ಸಹಕರಿಸಿದರು. ಸುಮಾರು 50ಕ್ಕಿಂತಲೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಯಗಳಿಸಿದ ವಿದ್ಯಾರ್ಥಿಗಳಿಗೆ ಪೈನಗರ್ ವಿಷನ್ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವುದು.

*ಪೈವಳಿಕೆನಗರ ಶಾಲೆಯಲ್ಲಿ ಹೆಲ್ಲೆನ್ ಕೆಲ್ಲರ್ ದಿನಾಚರಣೆ
ಪೈವಳಿಕೆನಗರ, ಜೂ.26 ಹೆಲ್ಲೆನ್ ಕೆಲ್ಲರ್ ದಿನಾಚರಣೆಯಂಗವಾಗಿ ಪೈವಳಿಕೆನಗರ ಸರಕಾರಿ ಹಯರ್ ಸೆಕಂಡರಿ ಶಾಲೆಯಲ್ಲಿ ಕೆಲ್ಲರ್ ಜೀವನದ ಕಷ್ಟ ಸುಖಗಳನ್ನು ಪ್ರತಿಬಿಂಬಿಸುವ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಶಿಕ್ಷಕರಾದ ಶ್ರೀ ರವೀಂದ್ರನಾಥ್. ಕೆ.ಆರ್, ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀ ಕೃಷ್ಣ ಮೂರ್ತಿ ಎಂ. ಎಸ್, ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶಶಿಕಲಾ ಟೀಚರ್, ಮುಖ್ಯ ಪರೀಕ್ಷಕರಾದ ಶ್ರೀ ಅಬ್ದುಲ್ ಲತೀಫ್ ಶುಭಾಶಂಸನೆಗೈದರು. ಇಂಗ್ಲೀಷ್ ಕ್ಲಬ್ ಕಾರ್ಯದರ್ಶಿ ಜಿಲ್ಜೋ ಎನ್ ಕಾರ್ಯಕ್ರಮ ನಡೆಸಿಕೊಟ್ಟರು.


*ಪೈವಳಿಕೆನಗರ ಶಾಲೆಯಲ್ಲಿ ಮಾದಕ ವಸ್ತು ವಿರುದ್ಧ ದಿನಾಚರಣೆ
ಪೈವಳಿಕೆನಗರ, ಜೂ.26 ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಮಾದಕ ವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಮಾದಕ ವಸ್ತು ವಿರುದ್ಧ ಪ್ರತಿಜ್ಞೆ ಕೈಗೊಂಡರು. ಚಾರ್ಟು ಪ್ರದರ್ಶನ ಏರ್ಪಡಿಸಲಾಗಿತ್ತು.


*8ಸಿ ತರಗತಿಯ ಬಾಲಸಭೆ
ಪೈವಳಿಕೆನಗರ, ಜೂ.25 ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ 8ಸಿ ತರಗತಿಯ ಈ ವರ್ಷದ ಮೂರನೇ ಬಾಲಸಭೆಯು ಜೂನ್ 25 ಗುರುವಾರ ಅಪರಾಹ್ನ 3.30ಕ್ಕೆ ಸರಿಯಾಗಿ ತರಗತಿ ಸಭಾಂಗಣದಲ್ಲಿ ನಡೆಯಿತು. ಮುರ್ಶೀನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಸಾಹಿತ್ಯ ಬೆಳವಣಿಗೆಗಂ ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದು ತಮ್ಮ ಅಧ್ಯಕ್ಷೀಯ ಬಾಷಣದಲ್ಲಿ ಅವರು ಅಭಿಪ್ರಾಯಪಟ್ಟರು. ತದನಂತರ ರಕ್ಷಿತ್, ಸಹನ, ಪೂಜಾಕುಮಾರಿ , ಫಾರೂಕ್ ಖಲಂದರ್ ಶಾಫಿ ಮತ್ತು ಬಳಗದವರು ವಿವಿಧ ಪದ್ಯಗಳನ್ನು ಹಾಡಿ ಎಲ್ಲರ ಮನರಂಜಿಸಿದರು. ಅಸೀನಾರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಅಕ್ಷಯ್ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ ಧೀರಜ್ ವಂದಿಸಿದರು.( ವರದಿ ವೈಭವಿ 8ಸಿ)


*ಪ್ಲಸ್ ವನ್ ಪ್ರಥಮ ಅಲೋಟ್ ಮೆಂಟ್
ಪೈವಳಿಕೆನಗರ, ಜೂ. 14 : ಪ್ಲಸ್ ವನ್ ಪ್ರವೇಶದ ಮಹತ್ವದ ಮೈಲಿಗಲ್ಲಾಗಿರುವ ಪ್ರಥಮ ಅಲೋಟ್ ಮೆಂಟ್ ಫಲಿತಾಂಶ ಜೂನ್ 16 ಮಂಗಳವಾರದಂದು ಪ್ರಕಟವಾಗಲಿದ್ದು ಶಾಲಾ ಪ್ರವೇಶಾತಿ ಆರಂಭವಾಗಲಿದೆ. ಪ್ರಥಮ ಓಪ್ಶನ್ ಅಲೋಟ್ ಮೆಂಟ್ ಲಭಿಸಿದ ವಿದ್ಯಾರ್ಥಿಗಳು ಟಿಸಿ ಮತ್ತು ಅಂಕಪಟ್ಟಿಯೊಂದಿಗೆ ಆಯಾ ಶಾಲೆಗಳಲ್ಲಿ ನಿಗದಿತ ದಿನಾಂಕದೊಳಗೆ ಶಾಶ್ವತವಾಗಿಯೂ ಇತರ ಓಪ್ಶನ್ ಲಭಿಸಿದವರು ತಾತ್ಕಾಲಿಕವಾಗಿಯೂ ಪ್ರವೇಶ ಪಡೆಯಬೇಕಾಗುವುದು. ನಿಗದಿತ ದಿನಾಂಕದೊಳಗೆ ಪ್ರವೇಶ ಪಡೆಯಲು ಸಾಧ್ಯವಾಗದವರು ಅಲೋಟ್ ಮೆಂಟ್ ಪ್ರವೇಶ ಪ್ರಕ್ರಿಯೆಯನ್ನು ಕಳೆದುಕೊಳ್ಳುವರು.

*ಪೈನಗರ್ ವಿಷನ್ ನಂಬರ್ ವನ್
ಪೈವಳಿಕೆನಗರ, ಜೂ. 14 : ಪೈವಳಿಕೆನಗರ ಶಾಲೆಯ ನಂಬರ್ ವನ್ ಮುದ್ರಣ ಆನ್ ಲೈನ್ ಸುದ್ದಿ ಮಾಧ್ಯಮವಾದ ಪೈನಗರ್ ವಿಷನ್ ಪತ್ರಿಕೆಯಲ್ಲಿ , ಬ್ಲಾಗ್ ನಲ್ಲಿ , ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಲು ವಿದ್ಯಾರ್ಥಿಗಳಿಂದ ಕಥೆ, ಕವನ, ಚಿತ್ರ, ಕಾರ್ಟೂನ್ ಗಳನ್ನು ಆಹ್ವಾನಿಸುತ್ತದೆ. ಸ್ವಂತ ರಚನೆಗಳನ್ನು ಪೈನಗರ್ ವಿಷನ್ ನ ಸುದ್ದಿ ಪೆಟ್ಟಿಗೆಗೆ ಹಾಕಬೇಕಾಗಿ ಸಂಬಂಧಪಟ್ಟವರು ವಿನಂತಿಸಿದ್ದಾರೆ.

*ಪೈವಳಿಕೆನಗರದ ಪ್ರಥಮ ಬಾಲಸಭೆ
ಪೈವಳಿಕೆನಗರ, ಜೂ. 11 : 8ಸಿ ತರಗತಿಯ 2015/16ನೇ ಸಾಲಿನ ಒಂದನೇ ಬಾಲಸಭೆಯು 11 ಜೂನ್ 2015 ಗುರುವಾರ ಅಪರಾಹ್ನ 3.30ಕ್ಕೆ ಸರಿಯಾಗಿ 8ಸಿ ತರಗತಿಯಲ್ಲಿ ನಡೆಯಿತು. ವೈಭವಿ .ಕೆ.ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೂಜಾ ಕುಮಾರಿ, ಉಮೈಬಾ, ರಕ್ಷಿತಾ ಪ್ರಾರ್ಥನೆ ಹಾಡಿದರು. ಅಕ್ಷಯ್ ಎ. ಒಂದು ಒಳ್ಳೆಯ ಪದ್ಯವನ್ನು ಹಾಡಿದರು. ಸಿಯಾಬ್ ಮತ್ತು ಬಳಗದವರು ಒಂದು ಹಾಡು ಹಾಡಿ ಸೇರಿದವರನ್ನು ರಂಜಿಸಿದರು. ಪೂಜಾ ಮತ್ತು ಬಳಗದವರು ಒಂದು ಹಾಡಿಗೆ ದನಿ ನೀಡಿದರು. ಅಕ್ಷಯ್ ಮತ್ತು ರಕ್ಷಿತ್ ಮಿಮಿಕ್ರಿ ಪ್ರದರ್ಶನ ವಿದ್ಯಾರ್ಥಿಗಳನ್ನು ಕೌತುಕದ ಕಡಲಲ್ಲಿ ತೇಲಿಸಿತು. ಕಾರ್ತಿಕ್ ಪಿ ಸ್ವಾಗತಿಸಿ ವಿನೀತ್ ಕುಮಾರ್ ವಂದಿಸಿದರು. ಫಾತಿಮತ್ ಸಹನ ಕಾರ್ಯಕ್ರಮ ನಿರ್ವಹಿಸಿದರು.

*ಗುಬ್ಬಚ್ಚಿ ಗೂಡಿನಲ್ಲಿ
ಪೈವಳಿಕೆನಗರ, ಜೂ. 9 : ಅದು ಜೂನ್ 9ರ ಅಪರಾಹ್ನ 1.30ಸಮಯ. ಹೈಸ್ಕೂಲ್ ವಿಭಾಗದ ಕಛೇರಿಯ ಎದುರು ವಿದ್ಯಾರ್ಥಿಗಳ ಗುಂಪು ಏನನ್ನೋ ಅರಸುತ್ತಿತ್ತು. ಕೆಲವರು ರಟ್ಟಿನ ಪೆಟ್ಟಿಗೆ ತಯಾರಿಸಿ ಸಮಯಕ್ಕಾಗಿ ಕಾಯುತ್ತಿದ್ದರು. ಶಿಕ್ಷಕರು ಹೇಳಿದಾಗಲೂ ವಿದ್ಯಾರ್ಥಿಗಳು ಮತ್ತು ಮತ್ತು ಏನನ್ನೋ ನೋಡಲು ಬರುತ್ತಿದ್ದರು. ಹತ್ತಿರ ಹೋಗಿ ನೋಡಿದರೆ ಒಂದು ಗುಬ್ಬಚ್ಚಿ ಗೂಡು. ಅದರೊಳಗೆ ಎರಡು ಮರಿಗಳು. ತುಂತುರು ಮಳೆಯಲ್ಲಿ ಒದ್ದೆಯಾದ ಗೂಡು. ಚಳಿಯಲ್ಲಿ ನಡುಗುತ್ತಿರುವ ಹಕ್ಕಿಗಳು. ಶಾಲಾ ಪರಿಸರ ಕ್ಲಬ್ ಪದಾಧಿಕಾರಿಗಳು ಪಕ್ಷಿಗಳ ರಕ್ಷಣೆಗಾಗಿ ಕಾರ್ಯಾಚರಣೆ ಆರಂಭಿಸಿದರೂ ಫಲ ನೀಡಲಿಲ್ಲ. ಆರೋಗ್ಯ ಕ್ಲಬ್ ನ ಸಂಚಾಲಕರಾದ ಶ್ರೀ ರವೀಂದ್ರನಾಥ ಸರ್ ಪಕ್ಷಿಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ಪೈನಗರ್ ವಿಷನ್ ಗೆ ನೀಡಿದ್ದಾರೆ.

*ಪೈವಳಿಕೆನಗರ ಶಾಲೆಯಲ್ಲಿ ಶಾಲಾ ವಾತಾವರಣ ನಿಧಾನವಾಗಿ ಆಸಕ್ತಿದಾಯಕ ಕಲಿಕೆಗಾಗಿ
ಪೈವಳಿಕೆನಗರ, ಜೂ.8 : ಜೂನ್ 1ರಿಂದ ಈ ಬಾರಿಯ ಅಧ್ಯಯನ ವರ್ಷ ಆರಂಭವಾದಂತೆ ಸಪ್ಪಗಾಗಿದ್ದ ಕಲಿಕಾ ವಾತಾವರಣ ಇದ್ದಕ್ಕಿದ್ದಂತೆ ಬದಲಾಗಿದೆ. ಪ್ರವೇಶೋತ್ಸವ ಹಾಗೂ ಪರಿಸರ ದಿನಾಚರಣೆಯಂಗವಾಗಿ ನಡೆದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಲ್ಲಿ ಭಾಗವಹಿಸಿದ್ದಾರೆ. ಇನ್ನು ವಿವಿಧ ಕ್ಲಬ್ ಗಳ ರಚನೆಯಾಗಲಿದ್ದು ಶಾಲಾ ಚಟುವಟಿಕೆಗಳು ಜೀವ ಪಡೆದುಕೊಳ್ಳಲಿದೆ. ಈ ಅಧ್ಯಯನ ವರ್ಷದಿಂದ ಎಂಟು ಅವಧಿಗಳು ಒಳಗೊಂಡಿದ್ದು ಆರೋಗ್ಯ, ಸಾಹಿತ್ಯ, ಸಂಗೀತ ಕ್ಷೇತ್ರಗಳಿಗೆ ಉತ್ತಮ ಪ್ರಾತಿನಿಧ್ಯ ಸಿಗಲಿದೆ.

*ವಿದ್ಯಾರ್ಥಿಗಳಿಗಾಗಿ ಪರಿಸರ ದಿನ ವಿಶೇಷ ಸ್ಪರ್ಧೆಗಳು
ಪೈವಳಿಕೆನಗರ, ಜೂ.5 : ಜೂನ್ 5 ವಿಶ್ವ ಪರಿಸರ ದಿನಾಚರಣೆಯಂದು ಪೈವಳಿಕೆನಗರ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಶಾಲಾ ಮಾಧ್ಯಮ ಕೇಂದ್ರದಲ್ಲಿ ಅಪರಾಹ್ನ 2 ಗಂಟೆಗೆ ಸರಿಯಾಗಿ ಪೋಸ್ಟರ್ ರಚನಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಹೈಸ್ಕೂಲ್ ವಿಭಾಗದ ಪೋಸ್ಟರ್ ರಚನಾ ಸ್ಪರ್ಧೆಯಲ್ಲಿ 9ಸಿ ತರಗತಿಯ ದುರ್ಗಾ ಪ್ರಸಾದ್ ಪ್ರಥಮ, 9ಸಿ ತರಗತಿಯ ವಿನ್ಸೆಂಟ್ ಡಿಸೋಜಾ ದ್ವಿತೀಯ, 9ಸಿ ತರಗತಿಯ ಹೇಮಾಶ್ರೀ ತೃತೀಯ ಸ್ಥಾನ ಪಡೆದರು. ಯುಪಿ ವಿಭಾಗದ ಪರಿಸರ ರಸಪ್ರಶ್ನೆ ಸ್ಪರ್ಧೆಯಲ್ಲಿ 6ಸಿ ತರಗತಿಯ ಸಾತ್ವಿಕ್ ಪ್ರಥಮ, 7ಸಿ ತರಗತಿಯ ಧನುಷ್ ದ್ವಿತೀಯ, 7ಸಿ ತರಗತಿಯ ರಕ್ಷಣ್ ತೃತೀಯ ಸ್ಥಾನಗಳಿಸಿದರು. ಎಲ್ ಪಿ ವಿಭಾಗದ ಸ್ಪರ್ಧೆಯಲ್ಲಿ 4ತರಗತಿಯ ನಿಧಿ ಪ್ರಥಮ, 4ಎ ತರಗತಿಯ ರೀಮಾ ಡಿಸೋಜಾ ದ್ವಿತೀಯ ಸ್ಥಾನಗಳಿಸಿದರು. ವಿಜೇತರಿಗೆ ಪೈನಗರ್ ವಿಷನ್ ನ ತುಂಬು ಹೃದಯದ ಅಭಿನಂದನೆಗಳು. ಎಲ್ಲಾ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು.

*ಟ್ರಯಲ್ ಅಲೋಟ್ ಮೆಂಟ್ ಫಲಿತಾಂಶ
ಪೈವಳಿಕೆನಗರ, ಜೂ7 : ಹಯರ್ ಸೆಕೆಂಡರಿ ಪ್ರವೇಶದ ಮುಖ್ಯ ಘಟ್ಟವಾದ ಟ್ರಯಲ್ ಅಲೋಟ್ ಮೆಂಟ್ ಫಲಿತಾಂಶ ಜೂನ್ 8 ಸೋಮವಾರದಂದು ಪ್ರಕಟವಾಗಲಿದೆ. ಎಚ್ ಎಸ್ ಕ್ಯಾಪ್ ಜಾಲತಾಣದಲ್ಲಿ ಫಲಿತಾಂಶ ಪ್ರಕಟವಾಗಲಿದ್ದು ವಿದ್ಯಾರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕ ದಾಖಲಿಸಿ ಅಲೋಟ್ ಮೆಂಟ್ ಸ್ಲಿಪ್ ಪಡೆಯಬಹುದು. ಒಪ್ಶನ್ ಬದಲಾಯಿಸಬೇಕಾದರೆ ಅರ್ಜಿ ಸಲ್ಲಿಸಬೇಕಾದ ಶಾಲೆಯಲ್ಲಿ ಕರೆಕ್ಷನ್ ಫಾರ್ಮ್ ಭರ್ತಿ ಮಾಡಿ ಜೂನ್ 9 ಸಂಜೆ 5 ಗಂಟೆಯೊಳಗೆ ರಕ್ಷಕರ ಸಹಿಯೊಂದಿಗೆ ಒಪ್ಪಿಸಬೇಕಾಗುವುದು. ನಂತರ ಎಚ್ ಎಸ್ ಕ್ಯಾಪ್ ಸೈಟ್ ಮುಚ್ಚಲಾಗುವುದು. ಜೂನ್ 16ರಂದು ಪ್ರಥಮ ಎಲೋಟ್ ಮೆಂಟ್ ಫಲಿತಾಂಶ ಪ್ರಕಟವಾಗುವುದು. 18ರ ಒಳಗೆ ಸಂಬಂಧಿಸಿದ ಶಾಲೆಯಲ್ಲಿ ಪ್ರವೇಶ ಪಡೆಯಬೇಕಾಗುವುದು.

*ಶಾಲಾ ಪಠ್ಯಪುಸ್ತಕ ವಿತರಣೆ
ಪೈವಳಿಕೆನಗರ, ಜೂ3 : ಪೈವಳಿಕೆನಗರ ಶಾಲೆಯ 9 ಮತ್ತು 10ನೇ ತರಗತಿಯ ಪಠ್ಯಪುಸ್ತಕಗಳು ಶಾಲಾ ಸೊಸೈಟಿ ಉಗ್ರಾಣಕ್ಕೆ ತಲುಪಿ ವಾರ ಕಳೆದರೂ ಪಡಕೊಳ್ಳಲು ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ತಲುಪುತ್ತಿದ್ದಾರೆ. ಬೇಕಾದ ವಿದ್ಯಾರ್ಥಿಗಳು ಆದಷ್ಟು ಬೇಗನೆ ಪುಸ್ತಕ ಖರೀದಿಸಿ ಸಹಕರಿಸಬೇಕೆಂದು ಸೊಸೈಟಿ ಮೇಲ್ವಿಚಾರಕರಾದ ಗೋಪಣ್ಣ ಮಾಸ್ಟರ್ ಕುರುಡುಪದವು ವಿನಂತಿಸಿದ್ದಾರೆ.

*ಮಧ್ಯಾಹ್ನದ ಭೋಜನ ವಿತರಣೆ
ಪೈವಳಿಕೆನಗರ, ಜೂ2 : ಪೈವಳಿಕೆನಗರ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಕಾರ ಮಂಗಳವಾರದಿಂದಲೇ ಆರಂಭವಾಗಿದ್ದು ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬುಧವಾರದಿಂದ ಹಾಲು, ಗುರುವಾರದಿಂದ ಮೊಟ್ಟೆ ವಿತರಣೆ ಶುಭಾರಂಭಗೊಂಡಿದೆ. ಹೋಟೆಲ್, ಕ್ಯಾಂಟೀನ್ ಇತರ ಸಂಸ್ಥೆಗಳ ಆಹಾರವಸ್ತುಗಳ ಬಗ್ಗೆ ಮಾಧ್ಯಮಗಳು ವರದಿ ಪ್ರಕಟಿಸುತ್ತಿರುವ ಕಾಲಘಟ್ಟದಲ್ಲಿ ಪೈವಳಿಕೆನಗರ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಶುಚಿ, ರುಚಿ, ಆರೋಗ್ಯಕರವಾದ ಆಹಾರವನ್ನು ಒದಗಿಸಲು ಶಾಲಾ ಮಧ್ಯಾಹ್ನದೂಟ ಸಮಿತಿ ಅವಿರತ ಪ್ರಯತ್ನ ನಡೆಸುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಶಾಲೆಯಲ್ಲಿನ ಬಿಸಿಯೂಟದ ಪ್ರಯೋಜನ ಪಡೆಯಬೇಕೆಂದು ಸಂಚಾಲಕರಾದ ಕರೀಂ ಮಾಸ್ಟರ್ ವಿನಂತಿಸಿದ್ದಾರೆ.


*ಪೈನಗರ್ ವಿಷನ್ ಮೂರನೇ ವರ್ಷಕ್ಕೆ ಪಾದಾರ್ಪಣೆ
ಪೈವಳಿಕೆನಗರ, ಜೂ.1 : ಪೈವಳಿಕೆನಗರ ಶಾಲೆಯ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಸುದ್ದಿ ಸಾಪ್ತಾಹಿಕ ಪೈನಗರ್ ವಿಷನ್ ಹಲವು ಏಳು ಬೀಳುಗಳ ನಡುವೆ ಯಶಸ್ವಿ 3ನೇ ವರ್ಷಕ್ಕೆ ಪಾದಾರ್ಪಣೆ ಗೈದಿದೆ. ಪೈವಳಿಕೆನಗರ ಶಾಲೆಯ ದೈನಂದಿನ ಆಗುಹೋಗುಗಳನ್ನು ವರದಿಮಾಡುತ್ತಾ ವಿದ್ಯಾರ್ಥಿಗಳ ರಚನೆಗಳಿಗೆ ಯೋಗ್ಯ ವೇದಿಕೆಗಳನ್ನು ಒದಗಿಸುವುದರೊಂದಿಗೆ ಶಾಲೆಯ ವಿದ್ಯಾರ್ಥಿಗಳ ಪ್ರತಿಭೆಗಳನ್ನು ನಾಡಿನಾದ್ಯಂತ ತಿಳಿಸಿ ಬೆಳೆಸುವ ಕಾರ್ಯಗಳನ್ನು ಮಾಡಿದ್ದು ಈಗ ಇತಿಹಾಸ. ಪೈವಳಿಕೆನಗರ ಶಾಲೆಯಲ್ಲಿ ನಡೆದ ಕಾರ್ಯಕ್ರಮಗಳ ಸಚಿತ್ರ ವರದಿ, ಕಲೋತ್ಸವ, ಕ್ರೀಡೋತ್ಸವ, ಮೇಳಗಳು ಇತರ ಸ್ಪರ್ಧೆಗಳಲ್ಲಿ ಉಪಜಿಲ್ಲಾ ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಬಾಗವಹಿಸಿ ಬಹುಮಾನಗಳಿಸಿದ ವಿದ್ಯಾರ್ಥಿಗಳ ವಿಶೇಷ ಸಂದರ್ಶನ ಲೇಖನಗಳು, ಕಥೆ, ಕವನ, ಪ್ರಬಂಧ, ಚಿತ್ರಗಳನ್ನು ಸ್ಥಳೀಯ ವೃತ್ತ ಪತ್ರಿಕೆಗಳಾದ ಕಾರವಲ್, ಉತ್ತರದೇಶ, ಕನ್ನಡ ಕೈರಳಿ, ಉದಯವಾಣಿ, ವಿಜಯಕರ್ನಾಟಕ, ಹೊಸದಿಗಂತ, ಪ್ರಜಾವಾಣಿ, ವಿಜಯವಾಣಿ ಮುಂತಾದ ಪತ್ರಿಕೆಗಳಿಗೆ ತಲುಪಿಸಿದ ಕೀರ್ತಿ ಪೈನಗರ್ ವಿಷನ್ ಗೆ ಮಾತ್ರ ಸಾಧ್ಯವಾಗಿದೆ. ಭಾಷೆಯ ಬಂಧನವನ್ನು ಮೀರಿ ಮಾತೃಭೂಮಿ, ಮನೋರಮಾ, ದೇಶಾಭಿಮಾನಿ, ಮಾಧ್ಯಮ, ಚಂದ್ರಿಕಾ ಮುಂತಾದ ಮಲಬಾರ್ ಪತ್ರಿಕೆಗಳಲ್ಲಿ ಪೈವಳಿಕೆನಗರ ಶಾಲೆಯ ಹೆಸರನ್ನು ಅಚ್ಚಳಿಯದೆ ನಿಲ್ಲುವಂತೆ ಮಾಡಿದ ಕೀರ್ತಿ ಪೈನಗರ್ ವಿಷನ್ ಹೆಮ್ಮೆಯಿಂದ ಹೇಳಿಕೊಳ್ಳುವುದು. ವಿದ್ಯಾರ್ಥಿ ಪತ್ರಿಕೋದ್ಯಮದ ವಿವಿಧ ಮಜಲುಗಳನ್ನು ಪರಿಚಯಿಸಿ ಸಮಾಜದಲ್ಲಿ ಮಾಧ್ಯಮಗಳು ಬೀರುವ ಪಾತ್ರದ ಬಗ್ಗೆ ಬೆಳಕು ಚೆಲ್ಲುವ ಪತ್ರಿಕೆಗೆ 5ರಿಂದ ಹತ್ತನೇ ತರಗತಿಯವರೆಗೆ ಪ್ರತಿನಿಧಿಗಳಿದ್ದಾರೆ. ಪತ್ರಿಕೆಯ ಬೆಳವಣಿಗೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಅಭಿಮಾನಿಗಳಿಗೂ ಪೈನಗರ್ ವಿಷನ್ ತುಂಬು ಹೃದಯದ ಧನ್ಯವಾದಗಳು. ಮುಂದೆಯೂ ನಿಮ್ಮ ಸಹಕಾರವನ್ನು ಬಯಸುತ್ತೇವೆ.




*ವಿಶ್ವ ಪರಿಸರ ದಿನಾಚರಣೆ ವರದಿ

ಪೈವಳಿಕೆನಗರ, ಜೂ.5 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಕೇರಳ ರಾಜ್ಯ ಅರಣ್ಯ ಇಲಾಖೆ ಕೊಡಮಾಡಿದ ಸಸಿಗಳನ್ನು ಪಿಟಿಎ ಅದ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ವಿದ್ಯಾರ್ಥಿಗಳಿಗೆ ವಿತರಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಭಟ್, ಪ್ರಾಂಶುಪಾಲರಾದ ಶ್ರೀ ಜೋರ್ಜ್ ಜೋಸೆಫ್, ಪಿಟಿಎ ಪದಾಧಿಕಾರಿಗಳಾದ ಅಹ್ಮದ್ ಹುಸೈನ್ ಪಿ.ಕೆ., ಕೃಷ್ಣ, ಇಬ್ರಾಹಿಂ, ರಾಧಾಕೃಷ್ಣ ಮಾಸ್ಟರ್, ಸುರೇಶ್ ಆಚಾರ್ಯ ಬಾಯಾರು, ಇಬ್ರಾಹಿಂ ಪಾವಲುಕೋಡಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಪೋಸ್ಟರ್ ರಚನಾ ಸ್ಪರ್ಧೆ, ಪರಿಸರ ರಸಪ್ರಶ್ನೆ ಏರ್ಪಡಿಸಲಾಗಿತ್ತು. ಯುಪಿ ವಿಭಾಗದಲ್ಲಿ 6ಸಿ ತರಗತಿಯ ಸಾತ್ವಿಕ್ ಪ್ರಥಮ, 7ಸಿ ತರಗತಿಯ ಧನುಷ್ ದ್ವಿತೀಯ, 7ಸಿ ತರಗತಿಯ ರಕ್ಷಣ್ ತೃತೀಯ ಸ್ಥಾನಗಳಿಸಿದರು. ಶಾಲಾ ಪರಿಸರ ಕ್ಲಬ್ ಸಂಚಾಲಕರಾದ ತಡತ್ತಿಲ್ ಸುನೀಶ್ ಕುಮಾರ್ ನೇತೃತ್ವ ನೀಡಿದರು.



ಪೈವಳಿಕೆನಗರ : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ ವಿಜೃಂಭಣೆಯಿಂದ ಜರಗಿತು. ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅಬ್ದುಲ್ಲ ಹಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಕ್ರೆಸೆಂಟ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಅಬ್ದುಲ್ ರಹಿಮಾನ್ , ಮದರ್ ಪಿಟಿಎ ಅಧ್ಯಕ್ಷೆಯಾದ ಶ್ರೀಮತಿ ರೋಹಿಣಿ, ಶಿಕ್ಷಕಿಯಾದ ಸ್ವರ್ಣಲತಾ, ಶಿಕ್ಷಕರಾದ ಬಾಲಕೃಷ್ಣ ಶುಭಾಶಂಸನೆಗೈದರು. ಒಂದನೇ ತರಗತಿಯ ವಿದ್ಯಾರ್ಥಿಗಳು ಅಕ್ಷರ ದೀಪ ಬೆಳಗಿದರು. ಹಸೀನಾ ಟೀಚರ್ ಪ್ರವೇಶೋತ್ಸವ ಗೀತೆ ಹಾಡಿದರು. ಪೈವಳಿಕೆಯ ಕ್ರೆಸೆಂಟ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗು ವಿತರಿಸಲಾಯಿತು. ಪೈವಳಿಕೆನಗರ ಶಾಲಾ ಉದ್ಯೋಗಿಗಳ ಸಂಘದ ವತಿಯಿಂದ ಪೆನ್ಸಿಲ್ , ಸ್ಲೇಟ್, ಗುರುತಿನ ಚೀಟಿ, ನೋಟು ಪುಸ್ತಕ, ರಬ್ಬರ್, ಬಲೂನ್ ಒಳಗೊಂಡ ಕಲಿಕೋಪಕರಣಗಳ ಕಿಟ್ ವಿತರಿಸಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪಾಯಸ ವಿತರಣೆ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸ ಸ್ವಾಗತಿಸಿ, ಹಸೀನಾ ಟೀಚರ್ ವಂದಿಸಿದರು. ಶಿಕ್ಷಕರಾದ ಶ್ರೀಧರ ಭಟ್ ಬೀಡುಬೈಲು ಕಾರ್ಯಕ್ರಮ ನಿರೂಪಿಸಿದರು.

No comments:

Post a Comment